ಅಂತರರಾಷ್ಟ್ರೀಯ

ಪುಟಿನ್ ಭೇಟಿಗೆ ಝೆಲೆನ್ಸ್ಕಿ ಒತ್ತಾಯ: ಬಾಂಬ್ ದಾಳಿ ತೀವ್ರಗೊಳಿಸಿದ ರಷ್ಯಾ

ಪುಟಿನ್ ಭೇಟಿಗೆ ಝೆಲೆನ್ಸ್ಕಿ ಒತ್ತಾಯ: ಬಾಂಬ್ ದಾಳಿ ತೀವ್ರಗೊಳಿಸಿದ ರಷ್ಯಾ

ಕೈವ್: ಮಾರ್ಚ್ 22: ರಷ್ಯಾದ ಪಡೆಗಳು ಉಕ್ರೇನ್‌ನ ಬಂದರು ನಗರವಾದ ಮಾರಿಯುಪೋಲ್‌ನ ಮೇಲೆ ತಮ್ಮ ಬಾಂಬ್ ದಾಳಿಯನ್ನು ಹೆಚ್ಚಿಸಿವೆ. 400 ಜನರು ಆಶ್ರಯ ಪಡೆದಿದ್ದ ಕಲಾ ಶಾಲೆಯ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಖಲೀಜ್ ಟೈಮ್ಸ್ ಇಂದು ವರದಿ ಮಾಡಿದೆ.

ಮಾರಿಯುಪೋಲ್ ನಲ್ಲಿ ತೀವ್ರ ದಾಳಿಗೂ ಮುನ್ನ ಉಕ್ರೇನಿಯನ್ನರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ರಷ್ಯಾ ಗಡುವು ನೀಡಿತ್ತು. ಆದರೆ, ಸ್ಥಳೀಯ ಅಧಿಕಾರಿಗಳು ರಷ್ಯಾದ ಸೂಚನೆಯನ್ನು ತಿರಸ್ಕರಿಸಿತ್ತು. ಈ ಮಧ್ಯೆ ಉಕ್ರೇನ್‌ನ ಝಪೊರಿಝಿಯಾ ಪ್ರದೇಶದ ಗವರ್ನರ್, ನಾಗರಿಕರನ್ನು ಸ್ಥಳಾಂತರಿಸುವ ಬಸ್‌ಗಳ ಮೇಲೆ ರಷ್ಯಾದ ಪಡೆಗಳು ದಾಳಿ ಮಾಡಿ ನಾಲ್ಕು ಮಕ್ಕಳನ್ನು ಗಾಯಗೊಳಿಸಿವೆ ಎಂದು ಆರೋಪಿಸಿದೆ.

ರಷ್ಯಾದ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಕಳೆದ 24 ಗಂಟೆಗಳಲ್ಲಿ 300 ಕ್ಕೂ ಹೆಚ್ಚು ವೈಮಾನಿಕ ಕಾರ್ಯಾಚರಣೆಗಳನ್ನು ನಡೆಸಿದೆ. ಕೈವ್ ಸಹ ತನ್ನ ವಾಯು ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು, ರಷ್ಯಾದ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಪ್ರಯತ್ನದಲ್ಲಿ ನಿರತವಾಗಿದೆ.

ರಷ್ಯಾದ ಪಡೆಗಳಿಂದ ಶೆಲ್ ದಾಳಿಗಳು ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ದೀರ್ಘಾವಧಿಯ ಕರ್ಫ್ಯೂ ಹೇರುವುದಾಗಿ ಕೈವ್ ಮೇಯರ್ ಸೋಮವಾರ ತಿಳಿಸಿದ್ದಾರೆ.

ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಸಲು ಮುಕ್ತವಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಉಕ್ರೇನ್ ನಲ್ಲಿ ಯುದ್ಧವನ್ನು ಕೊನೆಗೊಳಿಸಲು “ಯಾವುದೇ ರೂಪವಾದ್ರೂ ಸರಿಯೇ.. ಅದರ ಅಗತ್ಯವಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಝೆಲೆನ್ಸ್ಕಿ ರಾತ್ರಿ ಮಾಡಿದ ಭಾಷಣದಲ್ಲಿ  ‘ಉಕ್ರೇನ್ ಶಾಂತಿಯಲ್ಲಿ ಆಸಕ್ತಿ ಹೊಂದಿದ್ದು, ರಷ್ಯಾದೊಂದಿಗೆ ನಡೆಯುತ್ತಿರುವ ಮಾತುಕತೆಗಳು ಅಗತ್ಯತೆ’ ಇದೆ ಎಂದು ಹೇಳಿದರು.

ಸುದ್ದಿ ಓದಿ