ಯುವ ಟೇಕ್ವಾಂಡೋ ಅಥ್ಲೀಟ್ ಡ್ಯಾನಿಶ್ ಮಂಜೂರ್ ಗೆ ಬೇಕಾಗಿದೆ ಸಹಾಯ ಹಸ್ತ!
ನವದೆಹಲಿ: ಜುಲೈ 22: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಯುವ ಟೇಕ್ವಾಂಡೋ ಅಥ್ಲೀಟ್ ಡ್ಯಾನಿಶ್ ಮಂಜೂರ್ ಅವರು ಮುಂದಿನ ತಿಂಗಳು ಆಗಸ್ಟ್ನಲ್ಲಿ ಇಸ್ರೇಲ್ನ ರಮ್ಲಾದಲ್ಲಿ ನಡೆಯಲಿರುವ ಒಲಿಂಪಿಕ್ ಶ್ರೇಯಾಂಕದ ಈವೆಂಟ್ನಲ್ಲಿ (ಜಿ 2) ಭಾಗವಹಿಸಲು ಸಹಾಯ ಹಸ್ತ ಕೋರಿದ್ದಾರೆ.
ಆಗಸ್ಟ್ 12 ರಿಂದ ಆಗಸ್ಟ್ 15 ರವರೆಗೆ ರಾಮ್ಲಾದಲ್ಲಿ ನಡೆಯಲಿರುವ ಒಲಂಪಿಕ್ ಶ್ರೇಯಾಂಕದ ಈವೆಂಟ್ (G2) ನಲ್ಲಿ ಡ್ಯಾನಿಶ್ ಭಾಗವಹಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಕೂ ವೇದಿಕೆಯಲ್ಲಿ ಗಣ್ಯರು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ನಾನು ಜಮ್ಮು ಕಾಶ್ಮೀರದ ಡ್ಯಾನಿಶ್ ಮಂಜೂರ್. ನಾನು ಅಂತರಾಷ್ಟ್ರೀಯ ಟೇಕ್ವಾಂಡೋ ಅಥ್ಲೀಟ್. ಇಸ್ರೇಲ್ ನ ರಾಮ್ಲಾದಲ್ಲಿ ಆ.12 ರಿಂದ 15ರವರೆಗೆ ನಡೆಯುವ ಒಲಿಂಪಿಕ್ ಶ್ರೇಯಾಂಕದಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ದುರದೃಷ್ಟಾವಶಾತ್ ನಾನು ಇನ್ನು ಯಾವುದೇ ಪ್ರಾಯೋಜಕತ್ವ ಪಡೆದುಕೊಂಡಿಲ್ಲ. ವಿರಾಟ್ ಕೊಹ್ಲಿ, ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು, ಅಭಿನವ್ ಬಿಂದ್ರಾ, ಆಸಿಫ್ ಕಮಲ್ ಫೌಂಡೇಶನ್, ಸಂಜನಾ ಫೌಂಡೇಶನ್ ದಯಮಾಡಿ ಸಹಾಯ ಮಾಡುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸುತ್ತೇನೆ” ಎಂದು ಡ್ಯಾನಿಶ್ ಮಂಜೂರ್ ಕೂ ಅಪ್ಲಿಕೇಶನ್ನಲ್ಲಿ ತಿಳಿಸಿದ್ದಾರೆ.
58 ಕೆಜಿ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ಅಥ್ಲೀಟ್ ಡ್ಯಾನಿಶ್ ಮಂಜೂರ್ ಅವವರಿಗೆ ಒಬ್ಬರು ಪ್ರಾಯೋಜಕತ್ವ ನೀಡುತ್ತಿದ್ದು, ಅವರು ರೂ.50,000 ನೀಡಲಿದ್ದಾರೆ ಮತ್ತು ಈಗ ಅವರು ತಮ್ಮ ಪ್ರಯಾಣ, ವೀಸಾ, ಹೋಟೆಲ್, ಆಹಾರ, ಮತ್ತು ಪ್ರವೇಶ ಶುಲ್ಕ ಸೇರಿದಂತೆ ರೂ.1,15,000 ಬೇಕಾಗಿದೆ. ಹಾಗಾಗಿ ಮತ್ತೊಬ್ಬರ ಪ್ರಾಯೋಜಕರ ಹುಡುಕಾಟದಲ್ಲಿದ್ದಾರೆ.
2021 ರಲ್ಲಿ, ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ, ಪಂಜಾಬ್ನ ರೋಪರ್ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಡ್ಯಾನಿಶ್ ಬೆಳ್ಳಿ ಪದಕವನ್ನು ಗೆದ್ದಿದ್ದರು.