ರಂಗ ಭೂಮಿಗೆ ಏಣಗಿ ಬಾಳಪ್ಪನವರ ಕೊಡುಗೆ ಅಪಾರ: ಪರವಿನಾಯ್ಕರ
ಸವದತ್ತಿ 08: ರಂಗಭೂಮಿಗೆ ತಮ್ಮ ಜೀವವನ್ನೆ ಮುಡಿಪಾಗಿಟ್ಟ ನಾಟ್ಯ ಭೂಷಣ ಏಣಗಿ ಬಾಳಪ್ಪನವರು ರಂಗ ಭೂಮಿಗೆ ನೀಡಿರುವ ಕೊಡುಗೆಗಳು ಅಜರಾಮರವಾಗಿದ್ದು, ಅವರ ನೆನಪಿನಲ್ಲಿ ನಡೆಯುತ್ತಿರುವ ನಾಟಕೋತ್ಸವಗಳು ನಾಡಿಗೆ ಹಿರಿಮೆಯನ್ನು ತಂದಿದೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ ಪರವಿನಾಯ್ಕರ ಹೇಳಿದರು.
ಸ್ಥಳೀಯ ದೇಸಾಯಿ ಕೋಟೆಯ ಒಳಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡ ಪರಸಗಡ ನಾಟಕೋತ್ಸವ-2021ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ರಂಗ ಆರಾಧನಾ ಸಾಂಸ್ಕೃತಿ ಸಂಘಟನೆಯು 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ನಾಟಕೋತ್ಸವ ಯಶಸ್ವಿ ಹಾದಿಯತ್ತ ಸಾಗಿದ್ದು, 25ನೇ ವರ್ಷದ ಬೆಳ್ಳಿಹಬ್ಬಕ್ಕೆ ರಂಗಾಯಣದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ನ್ಯಾಯವಾದಿ ಎಮ್.ಬಿ.ಏಣಗಿ ಮಾತನಾಡಿ, ಸವದತ್ತಿಯಲ್ಲಿ ನಡೆಯುತ್ತಿರುವ ನಾಟಕೋತ್ಸವಗಳು ಹಿರಿಯ ರಂಗಭೂಮಿ ಕಲಾವಿದರಿಗೆ ಗೌರವ ಸೂಚಕವಾಗಿವೆ ಎಂದರು. ಸುಮಿತ್ರಾಬಾಯಿ ಕಾರದಗಿ, ಅನಸೂಯಾ ಕಿಟದಾಳ, ಪ್ರಭಾವತಿ ತುರುಮರಿ ಮಾತನಾಡಿದರು. ನಿರ್ದೇಶಕಿ ವೀಣಾ ಶರ್ಮಾ, ರೇಣುಕಾತಾಯಿ ಪಾಟೀಲ ಪದಕಿ, ಜಯಶ್ರೀ ಬೋನಗೇರಿ, ಡಾ.ಪ್ರೇಮಾ ಯಾಕೊಳ್ಳಿ, ಸುನೀತಾ ದ್ಯಾಮನಗೌಡರ, ಡಾ. ನಯನಾ ಬಸ್ಮೆ, ಗೀತಾ ಸರದಾರ, ಶ್ರೀದೇವಿ ವೈದ್ಯ ಇತರರು ಉಪಸ್ಥಿತರಿದ್ದರು.
ಝಕೀರನ ನದಾಫ ಸ್ವಾಗತಿಸಿದರು. ಪ್ರತಿಭಾ ವಕ್ಕುಂದ ನಿರೂಪಿಸಿದರು. ಗೋಪಾಲ ಪಾಸಲಕರ ವಂದಿಸಿದರು. ನಾಟ್ಯಭೂಷನ ಏಣಗಿ ಬಾಳಪ್ಪ ಪ್ರತಿಷ್ಠಾನದವರ ಪ್ರಾಯೋಜಕತ್ವದಲ್ಲಿ ವೀಣಾ ಶರ್ಮಾ ನಿರ್ದೇಶನದ ಸಾಮ್ರಾಟ ಅಶೋಕ ನಾಟಕ ಪ್ರದರ್ಶನಗೊಂಡಿತು.