ಗುಂಜಾವತಿಯಲ್ಲಿ ಕಾಡಾನೆಗಳ ಅಟ್ಟಹಾಸ: ಅಡಿಕೆ, ತೆಂಗು, ಬಾಳೆ ಬೆಳೆ ಧ್ವಂಸ
ಮುಂಡಗೋಡ 18: ತಾಲೂಕಿನ ಗುಂಜಾವತಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ರೈತರ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶಪಡಿಸಿದ ಘಟನೆ ನಡೆದಿದೆ.
ಗುಂಜಾವತಿ ಗ್ರಾಮದ ಎಂ.ಎಸ್. ಬಿಜಾಪುರ ಅವರಿಗೆ ಸೇರಿದ ಗದ್ದೆಗೆ ಕಾಡಾನೆಗಳು ದಾಳಿ ನಡೆಸಿದ್ದು, ಸುಮಾರು 95 ಅಡಿಕೆ ಗಿಡಗಳು ಹಾಗೂ 12 ತೆಂಗಿನ ಗಿಡಗಳು ಮುರಿದು ಸಂಪೂರ್ಣವಾಗಿ ನಾಶಗೊಂಡಿವೆ. ಅಲ್ಲದೆ, ಬಾಳೆ ಗಿಡಗಳು ಹಾಗೂ ಇತರ ಅಡಿಕೆ ಗಿಡಗಳಿಗೂ ಭಾರೀ ಹಾನಿಯಾಗಿದೆ. ರಾತ್ರಿ ಸಮಯದಲ್ಲಿ ಏಕಾಏಕಿ ಕಾಡಾನೆಗಳು ಗದ್ದೆಗೆ ನುಗ್ಗಿದ ಪರಿಣಾಮ ರೈತರು ಯಾವುದೇ ರೀತಿಯ ಪ್ರತಿರೋಧ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ರೈತರು ಅಪಾರ ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ.
ಈ ಪ್ರದೇಶದಲ್ಲಿ ಗುಂಜಾವತಿ, ಮೈನಳ್ಳಿ, ಉಗ್ಗಿನಕೇರಿ ಕಾತೂರ, ಶಿಂಗನಳ್ಳಿ, ಹೊನ್ನಳ್ಳಿ, ಹಾರವಳ್ಳಿ, ಸುಳ್ಳಳ್ಳಿ, ಹನುಮಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆ ದಾಳಿಗಳು ಪದೇಪದೇ ನಡೆಯುತ್ತಿದ್ದು, ರೈತರು ಭೀತಿಯ ವಾತಾವರಣದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕಾಡಾನೆಗಳಿಂದ ಶಾಶ್ವತ ರಕ್ಷಣೆಗಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಈಗಾಗಲೇ ಹಾನಿಗೊಳಗಾದ ರೈತರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.