ಇದು ಯುದ್ಧದ ಸಮಯವಲ್ಲ ಎಂದ ಮೋದಿಗೆ ಪುಟಿನ್ ಹೇಳಿದ್ದೇನು?
ಸಮರ್ ಕಂಡ್ : ಸೆಪ್ಟೆಂಬರ್ 16: ಉಕ್ರೇನ್ ಯುದ್ಧವು ಒಂಬತ್ತನೇ ತಿಂಗಳಿಗೆ ಕಾಲಿಡುತ್ತಿದ್ದು ಸಮರ್‌ಕಂಡ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈಗ ಯುದ್ಧದ ಸಮಯವಲ್ಲ ಎಂದು ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೇಳಿದ್ದಾರೆ.
ಮಾಸ್ಕೋದ ಪಡೆಗಳು ಉಕ್ರೇನ್ ಅನ್ನು ಆಕ್ರಮಿಸಿದ ನಂತರ ಉಭಯ ನಾಯಕರು ತಮ್ಮ ಮೊದಲ ಮುಖಾಮುಖಿ ಸಭೆಯಲ್ಲಿ ಇಂದಿನ ಸಮಯವು ಯುದ್ಧದ ಸಮಯವಲ್ಲ ಎಂದು ನನಗೆ ತಿಳಿದಿದೆ ಎಂದು ಸಮರ್ ಕಂಡ್ ನಲ್ಲಿ ಪುಟಿನ್‌ಗೆ ಪ್ರಧಾನಿ ಮೋದಿ ಹೇಳಿದರು. ಈ ವೇಳೆ ಫೆಬ್ರವರಿಯಲ್ಲಿ ಪ್ರಾರಂಭವಾದ ಉಕ್ರೇನ್ ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸಲು ಬಯಸುವುದಾಗಿ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದರು ಮತ್ತು ಭಾರತವು ಹೋರಾಟದ ಬಗ್ಗೆ ಕಳವಳವನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಂಡರು ಎಂದು ತಿಳಿದುಬಂದಿದೆ.
ಉಕ್ರೇನ್‌ನಲ್ಲಿನ ಸಂಘರ್ಷದ ಬಗ್ಗೆ ನಿಮ್ಮ ನಿಲುವು, ನಿಮ್ಮ ಕಾಳಜಿಗಳು ನನಗೆ ತಿಳಿದಿದೆ. ಇದನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಪುಟಿನ್ , ಮೋದಿಗೆ ತಿಳಿಸಿದರು. ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು ಎಂದು ತಿಳಿದುಬಂದಿದೆ.
ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ರಷ್ಯಾವನ್ನು ಭಾರತ ಇನ್ನೂ ಟೀಕಿಸಿಲ್ಲ. ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಲು ಒತ್ತಾಯಿಸುತ್ತಿದೆ. ರಷ್ಯಾ ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನಾಗಿ ಉಳಿದಿದೆ.