ವೀಕೆಂಡ್ ಕರ್ಫ್ಯೂಗೆ ಸವದತ್ತಿ ತಾಲೂಕು ಸ್ಥಬ್ದ
ಸವದತ್ತಿ 24: ರಾಜ್ಯಾದ್ಯಂತ 57 ಗಂಟೆಗಳ ಕಾಲ ಹಮ್ಮಿಕೊಂಡಿರುವ ವೀಕೆಂಡ್ ಕರ್ಫ್ಯೂಗೆ ಸವದತ್ತಿ ತಾಲೂಕಿನಾದ್ಯಂತ ಎಲ್ಲೆಡೆ ಸ್ಥಬ್ದ ವಾತಾವರಣ ಕಂಡು ಬಂದಿದ್ದು, ಎಲ್ಲ ವ್ಯಾಪಾರ ವಹಿವಾಟುಗಳು ಸಂಪೂರ್ಣ ಬಂದಾಗಿದ್ದವು.
ಶನಿವಾರ ಮುಂಜಾನೆ ದಿನಬಳಕೆ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಮದ್ಯಾಹ್ನದ ನಂತರ ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ ಮಾಡಲಾಗಿತ್ತು. ಪುರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಮಾಸ್ಕ್ ಇಲ್ಲದೆ ಸಂಚರಿಸುತ್ತಿರುವ ಜನರಿಗೆ ತಿಳುವಳಿಕೆ ಮೂಡಿಸುವದರ ಜೊತೆಗೆ ದಂಡವನ್ನು ಹಾಕುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ಧಾರೆ. ದೇಶ ಮತ್ತು ರಾಜ್ಯಾದ್ಯಂತ ಕೊರೊನಾ ಎರಡನೆ ಅಲೆಯ ಭಯದ ವಾತಾವರಣ ಸಾಕಷ್ಟಿದ್ದರೂ ಸಹಿತ ಮಾಸ್ಕ್ ಬಗ್ಗೆ ಜನರಲ್ಲಿ ಇನ್ನೂ ಜಾಗೃತೆ ಮೂಡುತ್ತಿಲ್ಲ. ಪೊಲೀಸರ ಕಾಟಕ್ಕೆ ಮಾಸ್ಕ್ ಹಾಕಿಕೊಳ್ಳುವ ಭ್ರಮೆಯಲ್ಲಿ ಜನರಿದ್ದು, ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರದೊಂದಿಗೆ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಬಳಸಬೇಕಾಗಿರುವುದು ಪ್ರಜ್ಞಾವಂತ ನಾಗರೀಕರ ಕರ್ತವ್ಯವವಾಗಿದೆ.
ಶನಿವಾರದ ಕರ್ಫ್ಯೂ ಸಂಪೂರ್ಣ ಯಶಸ್ವಿಯಾಗಿದ್ದು, ಪೊಲೀಸರೊಂದಿಗೆ ಪುರಸಭೆಯವರು ನಿಯೋಜಿಸಿರುವ ಮಾರ್ಷಗಳು ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಅಲೆದಾಡುವದನ್ನು ನಿರ್ಭಂದಿಸುತ್ತಿದ್ದಾರೆ.