ಕೃಷ್ಣಾ ನದಿ ತೀರದ ನಿವಾಸಿಗಳಿಗೆ ಎಚ್ಚರಿಕೆ; ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ
ಲೋಕದರ್ಶನ ವರದಿ
ಮಾಂಜರಿ 07 : ಕೃಷ್ಣಾ ನದಿಯ ಜಲಾನಯನ ಪ್ರದೇಶ ಹಾಗೂ ಕೊಂಕಣ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಚಿಕ್ಕೋಡಿ ಉಪವಿಭಾಗದ ಎಲ್ಲ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಹಲವೆಡೆ ನದಿಯ ನೀರು ಸಂಪರ್ಕ ರಸ್ತೆಗಳಿಗೆ ಹರಿದು ಬಂದಿದ್ದು, ಕೆಲ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಆದ್ದರಿಂದ ಸಾರ್ವಜನಿಕರು ಅನಿವಾರ್ಯ ಕೆಲಸವಿಲ್ಲದೆ ನದಿ ತೀರ, ಹಳ್ಳ-ಕೊಳ್ಳಗಳು ಹಾಗೂ ನೀರು ಹರಿಯುತ್ತಿರುವ ರಸ್ತೆಗಳಲ್ಲಿ ಸಂಚರಿಸಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಸಂಭಾವ್ಯ ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾಂಜರಿ ಗ್ರಾಮ ಪಂಚಾಯಿತಿಯ ವತಿಯಿಂದ ನೋಡಲ್ ಅಧಿಕಾರಿ ಬಸವರಾಜ ದಳವಾಯಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷ ಪೊತದಾರ ಅವರು ಕೃಷ್ಣಾ ನದಿ ತೀರದ ಹಾಗೂ ಹರಿತ ಕ್ರಾಂತಿ ನಗರದ ನಿವಾಸಿಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಹಿರಿಯ ನಾಗರಿಕರು, ಮಕ್ಕಳು, ಗರ್ಭಿಣಿಯರು ಸೇರಿದಂತೆ ಅಪಾಯದ ಪ್ರದೇಶದಲ್ಲಿರುವವರು ಅಗತ್ಯವಿದ್ದಲ್ಲಿ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದರು.
ರೈತರು ತಮ್ಮ ಜಾನುವಾರುಗಳು ಹಾಗೂ ಕೃಷಿ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು. ಪ್ರವಾಹ ಪರಿಸ್ಥಿತಿ ತೀವ್ರಗೊಂಡಲ್ಲಿ ಸ್ಥಳಾಂತರಗೊಂಡ ಕುಟುಂಬಗಳು ಹಾಗೂ ಜಾನುವಾರುಗಳಿಗೆ ತಾತ್ಕಾಲಿಕ ಆಶ್ರಯ, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಸೌಲಭ್ಯ ಸೇರಿದಂತೆ ಅಗತ್ಯ ನೆರವನ್ನು ಆಡಳಿತದಿಂದ ಒದಗಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಜಾವೇದ್ ಮಕಂದಾರ್, ವಿಶಾಲ್ ಪೂಜಾರಿ ಹಾಗೂ ರವೀಂದ್ರ ಕೋಳಿ ಅವರು ಕೂಡ ಗ್ರಾಮಸ್ಥರನ್ನು ಭೇಟಿ ಮಾಡಿ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.