ಪ್ರಜಾಪ್ರಭುತ್ವದ ಆಶಯಕ್ಕೆ ಮತದಾನ ಅಡಿಪಾಯ: ತಾಪಂ ಇಓ ಹನಗಂಡಿ
ಮುಂಡರಗಿ: ಭಾರತ ಪ್ರಜಾಪ್ರಭುತ್ವದ ದೇಶ. ಪ್ರಜಾಪ್ರಭುತ್ವದ ಆಶಯಕ್ಕೆ ಮತದಾನ ಅಡಿಪಾಯವಾಗಿದ್ದು, ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೇ ಎಲ್ಲರೂ ಮತದಾನ ಮಾಡಬೇಕೆಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಯುವರಾಜ್ ಹನಗಂಡಿ ಕರೆ ನೀಡಿದರು.
ಮುಂಡರಗಿ ತಾಲೂಕು ಚುನಾವಣಾ ಸ್ವೀಪ್ ಸಮಿತಿ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಪ್ಪತ್ತಗಿರಿ ಗ್ರಾಮದ ಹೊರವಲಯದಲ್ಲಿ ನರೇಗಾ ಬಾಂದಾರ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಭಾರತದಲ್ಲಿ ಚುನಾವಣೆ ಪಾತ್ರ ಬಹು ಮಹತ್ವದ್ದು. ನಿಮಗೆ ಬೇಕಾದ ಅಭ್ಯರ್ಥಿಗೆ ಮತ ಹಾಕುವ ಸ್ವಾತಂತ್ರ್ಯ ನಿಮಗಿದೆ. ಮತಹಾಕಲು ಯಾರೂ ಆಮಿಷಕ್ಕೆ ಒಳಗಾಗಬೇಡಿ ಎಂದರು. ಉತ್ತಮ ನಾಳೆಗಳು ಬೇಕಾದರೆ ಮತದಾನ ಮಾಡುವ ಮೂಲಕ ಎಲ್ಲ ಅರ್ಹ ನಾಗರಿಕರು ಮತದಾನದ ಹಕ್ಕು ಚಲಾಯಿಸಬೇಕು. ಮತದಾರನ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಿ ಎಂದರು. ಇದೇ ವೇಳೆ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾ ವಿಧಿ ಸಹ ಬೋಧಿಸಲಾಯಿತು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸವಿತಾ, ಟಿಸಿ ಹರೀಶ ಸೊಬರದ, ಟಿಐಇಸಿ ಎಸ್.ಎಂ.ಸತ್ಯಣ್ಣವರ, ತಾಂತ್ರಿಕ ಸಹಾಯಕಿ ರೇಷ್ಮಾ ಕೆಲೂರ ಹಾಗೂ ತಾಪಂ ಸಿಬ್ಬಂದಿ ಕದಾಂಪುರ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಜರಿದ್ದರು.