ಅಂತರರಾಷ್ಟ್ರೀಯ

ಶ್ರೀಲಂಕಾದಲ್ಲಿ ಹಿಂಸಾಚಾರ; ಕೊಲಂಬೊ ತೊರೆದು ಅಜ್ಞಾತ ಸ್ಥಳದಲ್ಲಿ ಬೀಡುಬಿಟ್ಟ ಮಹಿಂದಾ ರಾಜಪಕ್ಸೆ

ಶ್ರೀಲಂಕಾದಲ್ಲಿ ಹಿಂಸಾಚಾರ; ಕೊಲಂಬೊ ತೊರೆದು ಅಜ್ಞಾತ ಸ್ಥಳದಲ್ಲಿ ಬೀಡುಬಿಟ್ಟ ಮಹಿಂದಾ ರಾಜಪಕ್ಸೆ

ಕೊಲಂಬೊ: ಮೇ 10: ಪ್ರತಿಭಟನೆಯ ಬೆಂಕಿಯಲ್ಲಿ ಬೇಯುತ್ತಿರೋ ಶ್ರೀಲಂಕಾದಲ್ಲಿ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆಗೆ ಜೀವಭಯ ಕಾಡ್ತಿದೆ. ಹೀಗಾಗಿ ಅವರು ಮತ್ತು ಅವರ ಕುಟುಂಬವು ದ್ವೀಪ ರಾಷ್ಟ್ರದ ಈಶಾನ್ಯ ಭಾಗದಲ್ಲಿರುವ ಟ್ರಿಂಕೋಮಲಿಯಲ್ಲಿರುವ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದೆ ಎಂದು ಮೂಲಗಳು ತಿಳಿಸಿವೆ. ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ನಡುವೆ ಮಾರಣಾಂತಿಕ ಪ್ರತಿಭಟನೆಗಳು ಮುಂದುವರೆದಿದ್ದು ರಾಜೀನಾಮೆ ಬಳಿಕ ಮಹಿಂದಾ ರಾಜಪಕ್ಸೆ ಬೇರೆಡೆ ತೆರಳಿದ್ದಾರೆ.

ಮಾಜಿ ಪ್ರಧಾನಿ ಮತ್ತು ಅವರ ಕುಟುಂಬವನ್ನು ಹೆಲಿಕಾಪ್ಟರ್‌ನಲ್ಲಿ ನೌಕಾನೆಲೆಗೆ ಕೊಂಡೊಯ್ಯಲಾಗಿದೆ ಎಂದು ವರದಿಯಾಗಿದೆ. ಅದಾಗ್ಯೂ ರಾಜಧಾನಿ ಕೊಲಂಬೊದಿಂದ ಸುಮಾರು 270 ಕಿಮೀ ದೂರದಲ್ಲಿರುವ ನೌಕಾ ನೆಲೆಯ ಹೊರಗೆ ಪ್ರತಿಭಟನೆಗಳು ನಡೆದಿವೆ ಎಂದು ಗೊತ್ತಾಗಿದೆ.

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ನಾಗರಿಕರು ನಡೆಸಿದ ಪ್ರತಿಭಟನೆಗಳ ಸಂಘರ್ಷದ ವೇಳೆ ಭೀಕರ ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ ನಂತರ ಕರ್ಫ್ಯೂ ಜಾರಿಗೊಳಿಸಲಾಗಿದೆ.  ಶ್ರೀಲಂಕಾ ಇಂದು ಸಾವಿರಾರು ಸೈನಿಕರು ಮತ್ತು ಪೊಲೀಸರನ್ನು ನಿಯೋಜಿಸಿದೆ. ಮಹಿಂದಾ ರಾಜಪಕ್ಸೆ ರಾಜೀನಾಮೆ ಬಳಿಕ ಪ್ರತಿಭಟನೆಯಲ್ಲಿ ಸುಮಾರು 200 ಮಂದಿ ನಿನ್ನೆ ಗಾಯಗೊಂಡಿದ್ದಾರೆ.

ಕೊಲಂಬೊದಲ್ಲಿನ ಮಹಿಂದಾ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ರಾತ್ರೋರಾತ್ರಿ ಸಾವಿರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ನಂತರ ಅಶ್ರುವಾಯು ಮತ್ತು ಎಚ್ಚರಿಕೆಯ ಗುಂಡುಗಳನ್ನು ಸಿಡಿಸಿ  ಗುಂಪನ್ನು ಹಿಮ್ಮೆಟ್ಟಿಸುವ ಮೂಲಕ ಇಂದು ಮುಂಜಾನೆ ಮಿಲಿಟರಿ ಕಾರ್ಯಾಚರಣೆಯಲ್ಲಿ ಅವರನ್ನು ರಕ್ಷಿಸಬೇಕಾಯಿತು.

ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷವಾದ ಸಮಗಿ ಜನ ಬಲವೇಗಯಾ ತನ್ನ ನಾಯಕತ್ವದಲ್ಲಿ ಮಧ್ಯಂತರ ಸರ್ಕಾರವನ್ನು ರಚಿಸುವ ರಾಷ್ಟ್ರಪತಿಯವರ ಪ್ರಸ್ತಾಪವನ್ನು ಇಂದು ತಿರಸ್ಕರಿಸಿದೆ. ಬದಲಿಗೆ ಎಸ್‌ಜೆಬಿ ರಾಷ್ಟ್ರಪತಿಯವರ ರಾಜೀನಾಮೆಗೆ ಒತ್ತಾಯಿಸಿದೆ.

ಮಹಿಂದಾ ರಾಜಪಕ್ಸೆ ಬೆಂಬಲಿಗರು ನಿನ್ನೆ ರಾಜಧಾನಿಯಲ್ಲಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಬಳಿಕ ಹಿಂಸಾಚಾರ ಪ್ರಾರಂಭವಾಯಿತು.

ಕೊಲಂಬೊದ ಹೊರಗೆ, ಆಡಳಿತ ಪಕ್ಷದ ಶಾಸಕ ಅಮರಕೀರ್ತಿ ಅತು ಕೋರಾಲ ಅವರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಇಬ್ಬರನ್ನ ಸಾಯಿಸಿದರು. ಬಳಿಕ ತಾವೂ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿದರು.

ಕರ್ಫ್ಯೂ ಹೊರತಾಗಿಯೂ ಆಡಳಿತ ಪಕ್ಷದ ಉನ್ನತ ರಾಜಕಾರಣಿಗಳ ಕನಿಷ್ಠ 41 ಮನೆಗಳನ್ನು ರಾತ್ರಿಯಿಡೀ ಸುಟ್ಟು ಹಾಕಲಾಯಿತು. ಆ ಮನೆಗಳಲ್ಲಿ ನಿಲ್ಲಿಸಿದ್ದ ನೂರಾರು ದ್ವಿಚಕ್ರ ವಾಹನಗಳೂ ಸುಟ್ಟು ಕರಕಲಾಗಿವೆ.

ಸುದ್ದಿ ಓದಿ