ಅಂತರರಾಷ್ಟ್ರೀಯ

ಉಂಗಾ ತುರ್ತು ಅಧಿವೇಶನ: ರಷ್ಯಾಕ್ಕೆ ಭಾರಿ ಹಿನ್ನೆಡೆ-ಅಂತರ ಕಾಯ್ದುಕೊಂಡ ಭಾರತ

ಉಂಗಾ ತುರ್ತು ಅಧಿವೇಶನ: ರಷ್ಯಾಕ್ಕೆ ಭಾರಿ ಹಿನ್ನೆಡೆ-ಅಂತರ ಕಾಯ್ದುಕೊಂಡ ಭಾರತ

ನ್ಯೂಯಾರ್ಕ್: ಏಪ್ರಿಲ್ 07: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಿಂದ ರಷ್ಯಾವನ್ನು ಹೊರಗಿಡುವ ಕರಡು ನಿರ್ಣಯದ ಮೇಲೆ ಮತ ಚಲಾಯಿಸಿದೆ. ನಿರ್ಣಯವನ್ನು ಬೆಂಬಲಿಸಿ 93 ಸದಸ್ಯರು ಮತ ಚಲಾಯಿಸುವುದರೊಂದಿಗೆ ಆಯೋಗದಿಂದ ರಷ್ಯಾವನ್ನು ಹೊರಗಿಡಲಾಯಿತು.

ಉಕ್ರೇನ್‌ ಮೇಲೆ ರಷ್ಯಾದ ಸೈನಿಕರ ಕ್ರೂರತೆಯ ಪರಿಣಾಮವಾಗಿ ರಷ್ಯಾ ಇಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ (UNHRC) ಹಿಂದೆ ಸರಿದಿದೆ. ಗುರುವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ವಿಶೇಷ ತುರ್ತು ಅಧಿವೇಶನದಲ್ಲಿ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ಕರಡು ನಿರ್ಣಯದ ಮೇಲೆ ಮತ ಚಲಾಯಿಸಲಾಯಿತು.

ಅಮೆರಿಕದ ಉದ್ದೇಶಿತ ಕ್ರಮದ ಮೇಲೆ ಉಂಗಾ ಮತದಾನದಲ್ಲಿ 93 ಸದಸ್ಯರು ಯುಎನ್ಎಚ್ಆರ್‌ಸಿ ಯಿಂದ ರಷ್ಯಾವನ್ನು ಹೊರಗಿಡುವ ಪ್ರಸ್ತಾಪದ ಪರವಾಗಿ ಮತ ಚಲಾಯಿಸಿದರು. ಈ ವೇಳೆ 24 ದೇಶಗಳು ಈ ಪ್ರಸ್ತಾಪವನ್ನು ವಿರೋಧಿಸಿದವು ಮತ್ತು 58 ದೇಶಗಳು ಮತದಾನದಿಂದ ದೂರ ಉಳಿದವು. ರಷ್ಯಾ-ಉಕ್ರೇನ್ ವಿಷಯದಲ್ಲಿ ತನ್ನ ಹಳೆಯ ನಿಲುವಿನಂತೆಯೇ ಈ ಬಾರಿಯೂ ಭಾರತ ಮತದಾನದಿಂದ ಅಂತರ ಕಾಯ್ದುಕೊಂಡಿತು.

ಯುಎನ್‌ಎಚ್‌ಆರ್‌ಸಿಯಲ್ಲಿ ರಷ್ಯಾದ ಸದಸ್ಯತ್ವವನ್ನು ರದ್ದುಗೊಳಿಸುವುದು ಒಂದು ಆಯ್ಕೆಯಲ್ಲ, ಅದೊಂದು ಕರ್ತವ್ಯ ಎಂದು ಮತದಾನದ ಮೊದಲು ಉಕ್ರೇನ್ ಪ್ರತಿನಿಧಿ ಹೇಳಿದರು. ಸಾರ್ವಭೌಮ ರಾಷ್ಟ್ರದ ಪ್ರದೇಶದ ಮೇಲೆ UNHRC ಸದಸ್ಯತ್ವ ಪಡೆದಿರುವ ರಷ್ಯಾ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಟೀಕಿಸಿದು.

ಪ್ರಸ್ತಾಪದ ವಿರುದ್ಧ ಮತದಾನ:
ಅಲ್ಜೀರಿಯಾ, ಬೆಲಾರಸ್, ಬೊಲಿವಿಯಾ, ಬುರುಂಡಿ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚೀನಾ, ಕಾಂಗೋ, ಕ್ಯೂಬಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕೊರಿಯಾ, ಎರಿಟ್ರಿಯಾ, ಇಥಿಯೋಪಿಯಾ, ಗ್ಯಾಬೊನ್, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಲಾವೋಸ್, ಮಾಲಿ, ನಿಕರಾಗುವಾ, ರಷ್ಯಾ, ಸಿರಿಯನ್ ಅರಬ್ ರಿಪಬ್ಲಿಕ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ವಿಯೆಟ್ನಾಂ ಮತ್ತು ಜಿಂಬಾಬ್ವೆ ನಿರ್ಣಯದ ವಿರುದ್ಧ ಮತ ಚಲಾಯಿಸಿದವು.

ಉಕ್ರೇನ್ ಸ್ವಾಗತ
UNHRC ನಿಂದ ರಷ್ಯಾವನ್ನು ಹೊರಗಿಡುವ ನಿರ್ಧಾರವನ್ನು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಸ್ವಾಗತಿಸಿದ್ದಾರೆ. ಮಾನವ ಹಕ್ಕುಗಳನ್ನು ರಕ್ಷಿಸಲು ಯುಎನ್ ಘಟಕಗಳಲ್ಲಿ ಯುದ್ಧ ಅಪರಾಧಿಗಳಿಗೆ ಸ್ಥಳವಿಲ್ಲ ಎಂದು ಅವರು ಹೇಳಿದರು. ಈ ನಿರ್ಣಯವನ್ನು ಬೆಂಬಲಿಸಿದ ಸದಸ್ಯ ರಾಷ್ಟ್ರಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.

ಸುದ್ದಿ ಓದಿ