ಉಕ್ರೇನ್ ತಾನು ರಕ್ಷಿಸಿಕೊಳ್ಳುವುದಲ್ಲದೇ ಕಾರ್ಯಾಚರಣೆಯಲ್ಲಿ ಜಯಗಳಿಸಲಿದೆ: ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ
ಕೈವ್: ಫೆಬ್ರವರಿ 24 : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ಗೆ ಅನುಮೋದನೆ ನೀಡುವ ಮೂಲಕ ಯುದ್ಧವನ್ನು ಘೋಷಿಸಿದ್ದಾರೆ. ಯುದ್ಧ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಕೈವ್ ಮತ್ತು ಖಾರ್ಕಿವ್ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳು ಕಂಡುಬಂದಿವೆ. ಉಕ್ರೇನ್‌ನ ಖಾರ್ಕಿವ್, ಡೊನೆಟ್ಸ್ಕ್ ಪ್ರಾಂತ್ಯದ ಉಕ್ರೇನಿಯನ್ ನಗರವಾದ ಮರಿಯುಪೋಲ್ ಮತ್ತು ರಷ್ಯಾದ ಬೆಲ್ಗೊರೊಡ್ ಒಬ್ಲಾಸ್ಟ್ ನಲ್ಲಿಯೂ ಬಳಿ ದೊಡ್ಡ ಸ್ಫೋಟಗಳು ವರದಿಯಾಗಿದೆ.
ಇದೇ ವೇಳೆ ಪ್ರತಿಕ್ರಿಯಿಸಿದ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ, ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುವುದಲ್ಲದೇ ಈ ಕಾರ್ಯಾಚರಣೆಯಲ್ಲಿ ಜಯಗಳಿಸಲಿದೆ. ಪುಟಿನ್ ಇದೀಗ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ್ದಾರೆ. ಶಾಂತಿಯುತ ಉಕ್ರೇನಿಯನ್ ನಗರಗಳು ಬಂಧನದಲ್ಲಿವೆ. ಇದೊಂದು ಆಕ್ರಮಣಕಾರಿ ಯುದ್ಧ. ಜಗತ್ತು ಪುಟಿನ್ ಅನ್ನು ತಡೆಯಬಹುದು ಮತ್ತು ತಡೆಯಬೇಕು. ಇದೀಗ ಜಗತ್ತು ಪುಟೀನ್ ಕಾರ್ಯಾತಂತ್ರಕ್ಕೆ ಪ್ರತಿಕ್ರಿಯಿಸಬೇಕು. ಈಗ ರಷ್ಯಾದ ಮೇಲೆ ವಿನಾಶಕಾರಿ ಮತ್ತು ತ್ವರಿತ ನಿರ್ಬಂಧಗಳನ್ನು ಹೇರಬಹುದು. ಶಸ್ತ್ರಾಸ್ತ್ರಗಳು, ಉಪಕರಣಗಳು ಆರ್ಥಿಕ ಮತ್ತು ಮಾನವೀಯ ನೆರವು ಸೇರಿದಂತೆ ಎಲ್ಲಾ ಸ್ವರೂಪಗಳಲ್ಲಿ ಎಲ್ಲಾ ವಿಧಾನಗಳಿಂದ ರಷ್ಯಾವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಬಹುದು. ಯುರೋಪ್ ಮತ್ತು ಪ್ರಪಂಚದ ಭವಿಷ್ಯವು ಅಪಾಯದಲ್ಲಿದೆ ಎಂದು ಹೇಳಿದರು.