ಅಂತರರಾಷ್ಟ್ರೀಯ

ಉಕ್ರೇನ್‌ ವಿವಾದ; ಉದ್ವಿಗ್ನತೆ ಶಮನಗೊಳಿಸಲು ರಷ್ಯಾ, ಅಮೆರಿಕಾ ಪ್ರಯತ್ನ

ಉಕ್ರೇನ್‌ ವಿವಾದ; ಉದ್ವಿಗ್ನತೆ ಶಮನಗೊಳಿಸಲು ರಷ್ಯಾ, ಅಮೆರಿಕಾ ಪ್ರಯತ್ನ

ಜಿನೀವಾ, ಜ 22  – ಉಕ್ರೇನ್ ವಿಷಯದಲ್ಲಿ ಪರಸ್ಪರ ಎಚ್ಚರಿಕೆ ನೀಡುತ್ತಲೇ ಬಂದಿರುವ ಅಮೆರಿಕಾ, ರಷ್ಯಾ ಈಗ ತಮ್ಮ ವಾಗ್ವಾದದ ತೀವ್ರತೆಯನ್ನು ತಗ್ಗಿಸಿವೆ. ಈ ನಿಟ್ಟಿನಲ್ಲಿ ಉದ್ವಿಗ್ನತೆ ಶಮನಗೊಳಿಸಲು ಉಭಯ ದೇಶಗಳು ನಿರ್ಧರಿಸಿವೆ. ಆದರೆ, ಸಮಸ್ಯೆಗೆ ತಕ್ಷಣಕ್ಕೆ ಯಾವುದೇ ಪರಿಹಾರ ಕಂಡುಕೊಂಡಿಲ್ಲ ಎಂದು ಹೇಳಿವೆ. ಮತ್ತೊಂದೆಡೆ, ರಷ್ಯಾ ಯಾವುದೇ ಕ್ಷಣದಲ್ಲಿ ಉಕ್ರೇನ್ ಮೇಲೆ ಆಕ್ರಮಣ ನಡೆಸಬಹುದು ಎಂಬ ಆತಂಕ ಮುಂದುವರಿದಿದೆ. ಇದಕ್ಕೆ ಪೂರಕವಾಗಿ ಸುಮಾರು ಒಂದು ಲಕ್ಷ ರಷ್ಯಾ ಪಡೆಗಳು ಉಕ್ರೇನ್ ಬಳಿ ಮೊಕ್ಕಾಂ ಹೂಡಿವೆ.

ಈ ಹಿನ್ನೆಲೆಯಲ್ಲಿ ಜಿನೀವಾದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಭೇಟಿಮಾಡಿ ಮಾತುಕತೆ ನಡೆಸಿದರು. ಸಭೆಯಲ್ಲಿ ಯಾವುದೇ ತಕ್ಷಣದ ತೀರ್ಮಾನಕ್ಕೆ ಬರಲಾಗಿಲ್ಲ ಆದರೆ, ಎರಡೂ ದೇಶಗಳು ಪರಸ್ಪರ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ ಎಂದು ಬ್ಲಿಂಕನ್ ಹೇಳಿದ್ದಾರೆ. ಉಕ್ರೇನ್ ಮೇಲೆ ಆಕ್ರಮಣ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಲಾವ್ರೊವ್ ಸ್ಪಷ್ಟಪಡಿಸಿ, ಮಾತುಕತೆಗಳು ರಚನಾತ್ಮಕವಾಗಿ ನಡೆದಿವೆ ಎಂದು ಹೇಳಿದ್ದಾರೆ.

ಉಕ್ರೇನ್, ನ್ಯಾಟೋ ಸಂಬಂಧ ತಮ್ಮ ಬೇಡಿಕೆಗಳಿಗೆ ಮುಂದಿನ ವಾರ ಲಿಖಿತ ಉತ್ತರ ನೀಡುವುದಾಗಿ ಅಮೆರಿಕಾ ಒಪ್ಪಿಕೊಂಡಿದೆ ಎಂದು ಹೇಳಿದರು. ಉಕ್ರೇನ್ ಅನ್ನು ನ್ಯಾಟೋದಲ್ಲಿ ಎಂದಿಗೂ ಸೇರಿಸುವುದಿಲ್ಲ ಎಂಬುದನ್ನು ಖಾತರಿಪಡಿಸಬೇಕೆಂದು ರಷ್ಯಾ ಒತ್ತಾಯಿಸುತ್ತಿದೆ. ಅದೇ ರೀತಿ ಪೂರ್ವ ಯುರೋಪಿನ ಹಲವಾರು ಸ್ಥಳಗಳಿಂದ ನ್ಯಾಟೋ ಪಡೆಗಳನ್ನು ಹಿಂತೆಗೆದುಕೊಳ್ಳಲು ಕೋರಿದೆ ಈ ಬೇಡಿಕೆಗಳನ್ನು ಈಗಾಗಲೇ ಅಮೆರಿಕಾ, NATO ತಿರಸ್ಕರಿಸಿದೆ. ಈ ಬಗ್ಗೆ ಅಮೆರಿಕದಿಂದ ಲಿಖಿತ ಪ್ರತಿಕ್ರಿಯೆ ಬಂದ ನಂತರ ಮುಂದಿನ ಕ್ರಮ ನಿರ್ಧರಿಸಲಾಗುವುದು ಎಂದು ಲಾವ್ರೊವ್ ಹೇಳಿದ್ದಾರೆ.

ಸುದ್ದಿ ಓದಿ