ಅಂತರರಾಷ್ಟ್ರೀಯ

ಉಕ್ರೇನ್-ರಷ್ಯಾ ಯುದ್ಧ: ಶರಣಾಗತಿ ಗಡುವು ತಿರಸ್ಕರಿಸಿದ ಉಕ್ರೇನ್

ಉಕ್ರೇನ್-ರಷ್ಯಾ ಯುದ್ಧ: ಶರಣಾಗತಿ ಗಡುವು ತಿರಸ್ಕರಿಸಿದ ಉಕ್ರೇನ್

ಮಾಸ್ಕೋ/ಕೈವ್: ಮಾರ್ಚ್ 21: ಉಕ್ರೇನ್ ಮೇಲಿನ ರಷ್ಯಾ ದಾಳಿ 26ನೇ ದಿನಕ್ಕೆ ಕಾಲಿಟ್ಟಿದೆ. ಈ ಭೀಕರ ಯುದ್ಧದಲ್ಲಿ ಶರಣಾಗುವುದಿಲ್ಲ ಎಂದು ಸ್ಪಷ್ಟ ಸಂಕೇತವನ್ನು ಉಕ್ರೇನ್ ಸೇನೆ ನೀಡಿದೆ. ಅಲ್ಲದೆ, ಮಾರಿಯುಪೋಲ್ ನಗರವನ್ನು ವಶಪಡಿಸಿಕೊಳ್ಳುವ ಸಂಬಂಧ ರಷ್ಯಾ ನೀಡಿದ್ದ ಶರಣಾಗತಿ ಗಡುವು ಮುಗಿದಿದೆ. ರಷ್ಯಾ ಭಾನುವಾರ ರಾತ್ರಿ ಮಾರಿಯುಪೋಲ್‌ನಲ್ಲಿನ ಆಡಳಿತ ವರ್ಗಕ್ಕೆ ಶರಣಾಗುವಂತೆ ಸೂಚಿಸಿತ್ತು. ಮಾಸ್ಕೋ ಸಮಯ 5 ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 8 ಗಂಟೆಗೆ) ಗಡುವು ನೀಡಿತ್ತು. ಆದರೆ, ಈ ಶರಣಾಗತಿಯ ಪ್ರಸ್ತಾಪವನ್ನು ಉಕ್ರೇನ್ ಸರಕಾರ ಈಗಾಗಲೇ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಮಾರಿಯುಪೋಲ್ ನಲ್ಲಿ ರಷ್ಯಾ ಬಾಂಬ್ ದಾಳಿ ತೀವ್ರಗೊಳ್ಳುವ ಸಾಧ್ಯತೆ ಇದೆ.

ಮತ್ತೊಂದೆಡೆ ರಷ್ಯಾದ ಸೈನ್ಯವು ಭಾನುವಾರ ರಾತ್ರಿ ರಾಜಧಾನಿ ಕೈವ್‌ನ ವಸತಿ ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಈ ವೈಮಾನಿಕ ದಾಳಿಯಲ್ಲಿ ಅನೇಕರು ಸಾವಿಗೀಡಾಗಿದ್ದು, ಹಲವಾರು ಮನೆಗಳು ಮತ್ತು ಶಾಪಿಂಗ್ ಮಾಲ್ ಧ್ವಂಸಗೊಂಡಿವೆ.

ಶರಣಾಗತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಉಕ್ರೇನ್
ರಷ್ಯಾಕ್ಕೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್‌ನ ಉಪ ಪ್ರಧಾನಿ ಐರಿನಾ ವೆರೆಶ್‌ಚುಕ್ ಹೇಳಿದ್ದಾರೆ. ಯಾವುದೇ ರೀತಿಯಲ್ಲಿ ಶರಣಾಗತಿ ಅಥವಾ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತಹ ಮಾತುಕತೆಗಳು ರಷ್ಯಾದ ಜೊತೆ ನಡೆಯಲು ಸಾಧ್ಯವಿಲ್ಲ. ಈ ಬಗ್ಗೆ ನಾವು ಈಗಾಗಲೇ ರಷ್ಯಾಕ್ಕೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಪುಟಿನ್ ಗೆ ಬರೆದಿರುವ 8 ಪುಟಗಳ ಪತ್ರದಲ್ಲಿ ಸಮಯ ವ್ಯರ್ಥ ಮಾಡುವ ಬದಲು ರಷ್ಯಾ ಮಾನವೀಯ ಕಾರಿಡಾರ್ ತೆರೆಯಬೇಕು ಎಂದು ಐರಿನಾ ವೆರೆಶ್ ಚುಕ್ ತಿಳಿಸಿದ್ದಾರೆ.

ಸುದ್ದಿ ಓದಿ