ಬೆಲಾರಸ್‌ನಲ್ಲಿ ಉಕ್ರೇನ್-ರಷ್ಯಾ ಸಭೆ: ಯಶಸ್ಸು ನಿರೀಕ್ಷಿಸ ಬೇಡಿ ಎಂದ ಝೆಲೆನ್ಸ್ಕಿ
ಮಾಸ್ಕೋ/ಕೈವ್: ಫೆಬ್ರವರಿ 28: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿ ಸೋಮವಾರ ಐದನೇ ದಿನವೂ ಮುಂದುವರಿದಿದೆ. ಯುದ್ಧವನ್ನು ಕೊನೆಗೊಳಿಸಲು ಎರಡೂ ದೇಶಗಳ ನಿಯೋಗಗಳು ಬೆಲಾರಸ್‌ನಲ್ಲಿ ಮಾತುಕತೆ ನಡೆಸುತ್ತಿವೆ. ಈ ಚರ್ಚೆಗೂ ಪೂರ್ವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಈ ಸಭೆ ಯಶಸ್ವಿಯಾಗುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ. ಆದರೆ ಶಾಂತಿಗಾಗಿ ಪ್ರಯತ್ನಿಸುವುದರಲ್ಲಿ ಯಾವುದೇ ಹಾನಿ ಇಲ್ಲ ಎಂದು ಹೇಳಿದ್ದಾರೆ.
ಮಾತುಕತೆ ಪ್ರಾರಂಭಕ್ಕೂ ಮುನ್ನ ರಷ್ಯಾ ತನ್ನ ಸೇನೆಯನ್ನು ಉಕ್ರೇನ್ ಗಡಿಯಿಂದ ಹಿಂತೆಗೆದುಕೊಳ್ಳುವಂತೆ ಕೇಳಿತು. ಈ ಮಧ್ಯೆ ರಷ್ಯಾವನ್ನು ಬೆಂಬಲಿಸಲು ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸಲು ಬೆಲಾರಸ್ ತಯಾರಿ ನಡೆಸುತ್ತಿದೆ. ಈ ದ್ವಂದ್ವ ನಿಲುವಿನಲ್ಲಿ ಸಭೆ ಯಾವುದೇ ಪ್ರಗತಿ ಸಾಧಿಸಲಾಗುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.
ಇನ್ನೊಂದೆಡೆ ಯುರೋಪಿಯನ್ ದೇಶ ಲಾಟ್ವಿಯಾ ತನ್ನ ನಾಗರಿಕರನ್ನು ಉಕ್ರೇನ್‌ನಲ್ಲಿ ಯುದ್ಧದಲ್ಲಿ ಭಾಗವಹಿಸಲು ಅಣುವು ಮಾಡಿಕೊಟ್ಟಿದೆ. ಈ ಕುರಿತು ಲಾಟ್ವಿಯಾ ಸಂಸತ್ತು ನಿರ್ಣಯವನ್ನು ಅಂಗೀಕರಿಸಿದ್ದು, ಸಾಮಾನ್ಯ ಜನರು ಉಕ್ರೇನ್‌ನಲ್ಲಿ ಹೋರಾಡಲು ಬಯಸಿದರೆ, ಅವರು ಹೋಗಬಹುದಾಗಿದೆ ಎಂದು ತಿಳಿಸಿದೆ. ಇದಕ್ಕೂ ಮೊದಲು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ವಿಶ್ವದಾದ್ಯಂತ ಜನರಿಗೆ ಮನವಿ ಮಾಡಿದ್ದರು.