ನಿಮ್ಮ ಪ್ರಾಣ ಉಳಿಸಿಕೊಳ್ಳಿ, ಯುದ್ಧ ತೊರೆಯಿರಿ ರಷ್ಯಾ ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ಕರೆ
ಕೈವ್: ಫೆಬ್ರವರಿ 28: “ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಿ ಮತ್ತು ಯುದ್ಧ ತೊರೆಯಿರಿ” ಎಂದು ರಷ್ಯಾದ ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ.
ಸೋಮವಾರದಂದು ಅಧ್ಯಕ್ಷ ಝೆಲೆನ್ಸ್ಕಿ ಅವರು ಬೆಲಾರಸ್ ಗಡಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಮಾತುಕತೆಗೆ ಮುನ್ನ ಈ ಹೇಳಿಕೆ ನೀಡಿದ್ದಾರೆ. ರಷ್ಯಾದೊಂದಿಗಿನ ಮಾತುಕತೆಯ ಮುಖ್ಯ ಗುರಿಯು ತಕ್ಷಣದ ಕದನ ವಿರಾಮ ಮತ್ತು ರಾಷ್ಟ್ರದಿಂದ ರಷ್ಯಾದ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಹೇಳಿದೆ.
ರಷ್ಯಾದ ಆಕ್ರಮಣದ ವಿರುದ್ಧ ತಮ್ಮ ದೇಶವನ್ನು ರಕ್ಷಿಸಲು ಬಯಸುವ ಎಲ್ಲಾ ಉಕ್ರೇನಿಯನ್ ನಾಗರಿಕರಿಗೆ ಸರ್ಕಾರವು ಶಸ್ತ್ರಾಸ್ತ್ರಗಳನ್ನು ನೀಡುತ್ತದೆ ಎಂದು ಝೆಲೆನ್ಸ್ಕಿ ಈ ಹಿಂದೆ ಹೇಳಿದ್ದರು.
ರಷ್ಯಾ ದೇಶವನ್ನು ಆಕ್ರಮಿಸಿದ ನಂತರ 350 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 5,300 ರಷ್ಯಾದ ಸೈನಿಕರು ಉಕ್ರೇನಿಯನ್ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನಿಯನ್ ಸರ್ಕಾರ ಹೇಳಿಕೊಂಡಿದೆ. ಬಲಿಯಾದವರ ಸಂಖ್ಯೆಯನ್ನು ರಷ್ಯಾ ಬಹಿರಂಗಪಡಿಸಿಲ್ಲ.
ಉಕ್ರೇನ್‌ನ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಝೆಲೆನ್ಸ್ಕಿ, ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ, ನಮ್ಮಲ್ಲಿ ಪ್ರತಿಯೊಬ್ಬರೂ ಅಧ್ಯಕ್ಷರು ಎಂದು ನಾನು ಹೇಳಿದ್ದೆ. ಏಕೆಂದರೆ ನಮ್ಮ ನಮ್ಮ ಸುಂದರ ಉಕ್ರೇನ್‌ಗೆ ನಾವೆಲ್ಲರೂ ಜವಾಬ್ದಾರರು ಮತ್ತು ನಮ್ಮಲ್ಲಿ ಪ್ರತಿಯೊಬ್ಬರೂ ಒಬ್ಬ ಯೋಧ’ ಎಂದು ಹೇಳಿದ್ದಾರೆ.