ರಷ್ಯಾದ ವಿರುದ್ಧ ಹೋರಾಟಕ್ಕೆ ಭಯಂಕರ ಜೈಲು ಕೈದಿಗಳ ಬಳಕೆಗೆ ಉಕ್ರೇನ್ ನಿರ್ಧಾರ!
ಕೈವ್: 28 ರಷ್ಯಾದ ನಿರಂತರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಉಕ್ರೇನ್ ಯಾವುದೇ ಸಣ್ಣ ಅಸ್ತ್ರವನ್ನು ಬಿಡುತ್ತಿಲ್ಲ. ಈ ಮಧ್ಯೆ ರಣಭಯಂಕರ ಕೈದಿಗಳು ಹಾಗೂ ಮಿಲಿಟರಿ ಹಿನ್ನೆಲೆಯುಳ್ಳ ಆರೋಪಿಗಳನ್ನು ಯುದ್ಧ ಭೂಮಿಗೆ ಕಳುಹಿಸಲು ಉಕ್ರೇನ್ ನಿರ್ಧರಿಸಿದೆ. ಉಕ್ರೇನ್ ನ ರಾಷ್ಟ್ರೀಯ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಈ ನಿರ್ಧಾರವನ್ನು ದೃಢಪಡಿಸಿದೆ.
ಬಿಡುಗಡೆಗೆ ಯುದ್ಧ ಅನುಭವ ಅಗತ್ಯ
ಅಪರಾಧಿಯ ಸೇವಾ ದಾಖಲೆ, ಯುದ್ಧದ ಅನುಭವ ಮತ್ತು ಜೈಲಿನಲ್ಲಿ ಆತನ ವರ್ತನೆಯನ್ನು ಪರಿಗಣಿಸಿದ ನಂತರವೇ ವಾರ್ ಝೋನ್ ನಲ್ಲಿ ಭಾಗಿಯಾಗಾಲು ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಪ್ರಾಸಿಕ್ಯೂಟರ್ ಜನರಲ್ ಕಚೇರಿಯ ಅಧಿಕಾರಿ ಆಂಡ್ರೆ ಸಿನುಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಸಿಡ್ ಎಸೆದು, ಇರಿದು ಕೊಲೆ
ಈ ನಿರ್ಧಾರದ ಬಳಿಕ ಮಾಜಿ ಯುದ್ಧ ಅನುಭವಿ ಖೈದಿಗಳಲ್ಲಿ ಸೆರ್ಗೆಯ್ ಟೋರ್ಬಿನ್ ಒಬ್ಬ. ಈತನನ್ನು ಬಿಡುಗಡೆಗೆ ನಿರ್ಧರಿಸಲಾಗಿದ್ದು, ಅಪರಾಧಿ ಟೊರ್ಬಿನ್ ಈ ಹಿಂದೆ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಗಳೊಂದಿಗೆ ಯುದ್ಧಗಳಲ್ಲಿ ಹೋರಾಡಿದ್ದ. 2018ರಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತೆ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಕಟೆರಿನಾ ಹ್ಯಾಂಡ್ಜುಕ್ ಮೇಲೆ ಆಸಿಡ್ ಎರೆಚಿದ್ದ. ಇದಾದ ಬಳಿಕ ಆಕೆ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ಟೊರ್ಬಿನ್ ವಿರುದ್ಧ ಆರು ವರ್ಷ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ಈಗ ಈತನನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿ ಆಂಡ್ರೆ ತಿಳಿಸಿದ್ದಾರೆ.
2018 ರಲ್ಲಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿದ್ದಕ್ಕಾಗಿ ಒಂಭತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮತ್ತೊಬ್ಬ ಮಾಜಿ ಸೈನಿಕ ಡಿಮಿಟ್ರಿ ಬಾಲಬುಖಾ ಕೂಡ ಬಿಡುಗಡೆಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.