ಅಂತರರಾಷ್ಟ್ರೀಯ

ಟಿಕ್ ಟಾಕ್ ನಿಷೇಧಿಸಲು ಅಮೆರಿಕ ನಿರ್ಧಾರ

ಟಿಕ್ ಟಾಕ್ ನಿಷೇಧಿಸಲು ಅಮೆರಿಕ ನಿರ್ಧಾರ

  ವಾಷಿಂಗ್ಟನ್, ಆಗಸ್ಟ್ 1: ಯುವ ಜನತೆಯನ್ನು ಮರುಳು ಮಾಡುತ್ತಿರುವ ಹಾಗೂ ದೇಶದ ಗೌಪ್ಯತೆಗೆ ಭಂಗ ತರುತ್ತಿರುವ ಟಿಕ್ ಟಾಕ್ ಆಪ್ ನಿಷೇಧಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ.
  ಚೀನಾದೊಂದಿಗಿನ ಸಾಮಾಜಿಕ ಜಾಲತಾಣ ವೇದಿಕೆ ಸಂಬಂಧದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದಲ್ಲಿ ಟಿಕ್‌ಟಾಕ್ ಕಾರ್ಯನಿರ್ವಹಣೆ ನಿಷೇಧಿಸಲಾಗುವುದು ಎಂದಿದ್ದಾರೆ.
 
 "ಟಿಕ್‌ಟಾಕ್‌ಗೆ ಸಂಬಂಧಿಸಿದಂತೆ, ನಾವು ಅವರನ್ನು ಅಮೆರಿಕದಿಂದ ನಿಷೇಧಿಸುತ್ತಿದ್ದೇವೆ" ಎಂದು ಟ್ರಂಪ್ ಶುಕ್ರವಾರ ತಡರಾತ್ರಿ ಫ್ಲೋರಿಡಾದಿಂದ ಹಿಂದಿರುಗುತ್ತಿದ್ದಾಗ ಏರ್ ಫೋರ್ಸ್ ಒನ್‌ನಲ್ಲಿದ್ದ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
 ಚೀನಾ ಒಡೆತನದ ಕಂಪನಿಯನ್ನು ಅಮೆರಿಕದಿಂದ ಶನಿವಾರದೊಳಗೆ ನಿಷೇಧಿಸುವ ಸಲುವಾಗಿ ಅಧ್ಯಕ್ಷರು ತಮ್ಮ ತುರ್ತು ಆರ್ಥಿಕ ಅಧಿಕಾರವನ್ನು ಬಳಸಿಕೊಂಡು ಕಾರ್ಯನಿರ್ವಾಹಕ ಆದೇಶ ನೀಡಬಹುದಾಗಿದೆ.  
 ಆ್ಯಪ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಲಕ್ಷಾಂತರ ಅಮೆರಿಕನ್ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದೆಯೇ ಎಂಬುದರ ಕುರಿತು ಆಡಳಿತವು ತನಿಖೆ ನಡೆಸುತ್ತಿರುವಾಗಲೇ ಅಧ್ಯಕ್ಷ ಟ್ರಂಪ್ ಅವರಿಂದ ಟಿಕ್ ಟಾಕ್ ನಿರ್ಧಾರ ಹೊರಬಂದಿದೆ.
 ಗೌಪ್ಯತೆ ಸಮಸ್ಯೆಯನ್ನು ಉಲ್ಲೇಖಿಸಿ ಸರ್ಕಾರಿ ಸಾಧನಗಳಿಂದ ಟಿಕ್ ಟಾಕ್  ಅಪ್ಲಿಕೇಶನ್ ಅಳಿಸಲು ಅಮೆರಿಕ ನೌಕಾಪಡೆ ಕಳೆದ ವರ್ಷ ಸೇವಾ ಸದಸ್ಯರನ್ನು ಒತ್ತಾಯಿಸಿತು.
 ಆದರೆ ಬಳಕೆದಾರರು ಸಂಗ್ರಹಿಸಿದ ಯಾವುದೇ ಅಂಕಿಅಂಶಗಳನ್ನು  ಚೀನಾಕ್ಕೆ ಕಳುಹಿಸುವುದಿಲ್ಲ ಎಂದು ಟಿಕ್‌ಟಾಕ್ ಈ ಹಿಂದೆ ಹೇಳಿತ್ತು.

ಸುದ್ದಿ ಓದಿ