ಉಕ್ರೇನ್ ಮೇಲಿನ ದಾಳಿಗೆ ಅಮೆರಿಕ ಕಾರಣ – ಬೈಡನ್ ಟೀಕಿಸಿದ ಕಿಮ್ ಜಾಂಗ್ ಉನ್
ಮಾಸ್ಕೋ/ಕೀವ್: ಫೆಬ್ರವರಿ 27: ಉಕ್ರೇನ್ ಮೇಲೆ ರಷ್ಯಾದ ದಾಳಿ ಸತತ ನಾಲ್ಕನೇ ದಿನವೂ ಮುಂದುವರಿದಿದೆ. ಇದುವರೆಗೆ ನಡೆದ ಯುದ್ಧದಲ್ಲಿ ಸುಮಾರು 4,300 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಅಲ್ಲದೆ, ಸುಮಾರು 146 ಟ್ಯಾಂಕ್, 27 ವಿಮಾನ ಮತ್ತು 26 ಹೆಲಿಕಾಪ್ಟರ್‌ಗಳು ಹೊಡೆದುರುಳಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಇದಕ್ಕೂ ಮೊದಲು ಬೆಲಾರಸ್‌ನಲ್ಲಿ ಮಾತುಕತೆ ನಡೆಸಲು ರಷ್ಯಾ ಉಕ್ರೇನ್‌ಗೆ ಅವಕಾಶ ನೀಡಿತ್ತು. ಆದರೆ, ಉಕ್ರೇನ್ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ. ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ, “ನಾವು ರಷ್ಯಾದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ, ಆದರೆ ಬೆಲಾರಸ್ನಲ್ಲಿ ಅಲ್ಲ” ಎಂದು ತಿಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಮಧ್ಯೆ ಉತ್ತರ ಕೊರಿಯಾ, ಅಮೆರಿಕದ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ. ಸರ್ವಾಧಿಕಾರಿ ಕಿಮ್-ಜಾಂಗ್-ಉನ್ ನೇತೃತ್ವದ ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯ “ರಷ್ಯಾ ಮತ್ತು ಉಕ್ರೇನ್ ನಡುವಿನ ವಿವಾದದ ನಿಜವಾದ ಮೂಲ ಅಥವಾ ಕಾರಣ ಅಮೆರಿಕ. ಅವರು ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಬಳಿಕ ಅದನ್ನು ಶಾಂತಿಯ ಪ್ರಯತ್ನ ಎಂದು ಕರೆಯುತ್ತಾರೆ. ತಾನು ಅತ್ಯಂತ ಶಕ್ತಿಶಾಲಿಯಾಗಿದ್ದ ದಿನಗಳು ಕಳೆದುಹೋಗಿವೆ ಎಂಬುದನ್ನು ಅಮೆರಿಕ ಅರ್ಥಮಾಡಿಕೊಳ್ಳಬೇಕು ಎಂದು ಉತ್ತರ ಕೊರಿಯಾ ಹೇಳಿದೆ.