ರಷ್ಯಾ ಅಧ್ಯಕ್ಷರಾಗಿ ಪುಟಿನ್ ಮಾನ್ಯತೆ ರದ್ದತಿಗೆ ಅಮೆರಿಕಾ ನಿರ್ಣಯ
ವಾಷಿಂಗ್ಟನ್, ನ 19 : ವ್ಲಾಡಿಮಿರ್ ಪುಟಿನ್ ಅವರು 2024 ರ ನಂತರವೂ ಅಧಿಕಾರದಲ್ಲಿ ಮುಂದುವರಿದರೆ ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಅವರ ಮಾನ್ಯತೆಯನ್ನು ಅಮೆರಿಕಾ ಅಂತ್ಯಗೊಳಿಸಬೇಕೆಂಬ ನಿರ್ಣಯವನ್ನು ಕಾಂಗ್ರೆಸ್‌ನ ಇಬ್ಬರು ಸದಸ್ಯರು ಮಂಡಿಸಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ, ರಷ್ಯಾದ ದೇಶದ ಮುಖ್ಯಸ್ಥರು ಇನ್ನೂ ಎರಡು ಅವಧಿಗೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕನ್ನು ಕಲ್ಪಿಸುವ ಕಾನೂನಿಗೆ ಪುಟಿನ್ ಸಹಿ ಹಾಕಿದ್ದರು. ಈ ಸಂಬಂಧ ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ ಶೇ 77ಕ್ಕೂ ಹೆಚ್ಚು ರಷ್ಯನ್ನರು ಸಾಂವಿಧಾನಿಕ ತಿದ್ದುಪಡಿಗಳ ಪರವಾಗಿ ಮತ ಚಲಾಯಿಸಿದ್ದರು ಎಂದು ರಷ್ಯಾದ ಕೇಂದ್ರ ಚುನಾವಣಾ ಆಯೋಗ ತಿಳಿಸಿತ್ತು.
ಯುರೋಪ್‌ನಲ್ಲಿನ ಭದ್ರತೆ ಹಾಗೂ ಸಹಕಾರ ಆಯೋಗದ ಸಹ-ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಸದಸ್ಯ ಸ್ಟೀವ್ ಕೋಹೆನ್, ದಕ್ಷಿಣ ಕೆರೊಲಿನಾದ ಸದಸ್ಯ ಜೋ ವಿಲ್ಸನ್ ಅವರು " 2024ರ ಮೇ 7ರ ನಂತರವೂ ವ್ಲಾಡಿಮಿರ್ ಪುಟಿನ್ ಅವರು ನಿರಂಕುಶವಾಗಿ ಅಧಿಕಾರದಲ್ಲಿ ಮುಂದುವರಿದರೆ ಅವರನ್ನು ರಷ್ಯಾದ ಅಧ್ಯಕ್ಷರಾಗಿ ಮಾನ್ಯ ಮಾಡದಿರುವಂತಹ ನಿರ್ಣಯವನ್ನು ಮಂಡಿಸಿದ್ದಾರೆ. ಈ ಸಂಬಂಧ ಕೋಹೆನ್ ಕಚೇರಿ ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆಮಾಡಿದೆ.
ಪುಟಿನ್ ಅವರ ಅವಧಿಯಲ್ಲಿ ನಡೆದ ರಷ್ಯಾದ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿದ್ದವು. 2024 ರ ನಂತರ ಅವರು ಅಧಿಕಾರದಲ್ಲಿ ಮುಂದುವರೆಯುವುದು ನ್ಯಾಯಸಮ್ಮತವಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಸಾಂವಿಧಾನಿಕ ತಿದ್ದುಪಡಿಗಳು ರಷ್ಯಾದ ಒಕ್ಕೂಟದ ಅಧ್ಯಕ್ಷರಿಗೆ ಆರು ವರ್ಷಗಳ ಎರಡು ಸತತ ಅವಧಿಯ ಮಿತಿಯನ್ನು ಕಲ್ಪಿಸುತ್ತವೆ. ಕಾನೂನು ಬದಲಾವಣೆ ಜಾರಿಗೆ ಬಂದರೆ ನಿಬಂಧನೆ ಅಧ್ಯಕ್ಷರಿಗೆ ಅನ್ವಯಿಸುತ್ತದೆ, ಅಧ್ಯಕ್ಷ ಸ್ಥಾನದಲ್ಲಿ ಹಿಂದೆ ಸೇವೆ ಸಲ್ಲಿಸಿದ ಅವಧಿ ಗಣನೆಗೆ ಬರುವುದಿಲ್ಲ, ಹಾಗಾಗಿ ಪುಟಿನ್ ಅವರ ಪ್ರಸ್ತುತ ಅವಧಿ 2024 ರಲ್ಲಿ ಕೊನೆಗೊಂಡರೂ ನಂತರ ಮತ್ತೆ ಅಧಿಕಾರದಲ್ಲಿ ಮುಂದುವರಿಯಲು ದಾರಿ ಮಾಡಿಕೊಡುತ್ತದೆ.