ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂಪಡೆವ ಗಡುವು ವಿಸ್ತರಣೆ ಸಾಧ್ಯತೆ
ವಾಷಿಂಗ್ಟನ್, ಆಗಸ್ಟ್ 24 ಅಫ್ಘಾನಿಸ್ತಾನದಲ್ಲಿರುವ ತನ್ನ ಸೇನಾಪಡೆಯನ್ನು ಸಂಪೂರ್ಣವಾಗಿ ಹಿಂಪಡೆಯಲು ಅಮೆರಿಕ ಸರ್ಕಾರಕ್ಕೆ ಇದೇ 31ರ ಗಡುವು ನೀಡಲಾಗಿದೆ. ಆದರೆ ಈ ಗಡುವು ಮುಟ್ಟುವುದು ಅಸಂಭವ, ಈ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬಂದಿದೆ.
ಅಮೆರಿಕಾದ ಹೌಸ್ ಇಂಟೆಲಿಜೆನ್ಸ್ ಕಮಿಟಿ ಅಧ್ಯಕ್ಷ ಆಡಮ್ ಶಿಫ್ ಅವರು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಆಗಸ್ಟ್ 31 ರ ಗಡುವನ್ನು ಪೂರೈಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.
"ಇದು ಸಾಧ್ಯವಾದರೂ ಇನ್ನೂ ಸ್ಥಳಾಂತರಿಸಬೇಕಾದ ಕಾರ್ಯ ಸಾಕಷ್ಟಿದೆ. ಅಮೆರಿಕನ್ನರು, ಎಸ್‌ಐವಿ-ಅಫಘಾನ್ ವಿಶೇಷ ವಲಸೆಗಾರ ವೀಸಾ ಅರ್ಜಿದಾರರು, ಅಫಘಾನ್ ಪತ್ರಿಕಾ ಸದಸ್ಯರು, ನಾಗರಿಕ ಸಮಾಜದ ನಾಯಕರು , ಮಹಿಳಾ ನಾಯಕರು ಇದ್ದಾರೆ. ಹತ್ತಾರು ಅಮೆರಿಕ ನಾಗರಿಕರು, ಅಫ್ಘಾನ್ ಭಾಷಾಂತರಕಾರರು ಮತ್ತು ಅವರ ಕುಟುಂಬಗಳನ್ನು ಇನ್ನೂ ಕಾಬೂಲ್‌ನಿಂದ ಸ್ಥಳಾಂತರಿಸಬೇಕಾಗಿದೆ. ಹೀಗಾಗಿ ಆಗಸ್ಟ್ 31ರ ವೇಳೆಗೆ ಇವೆಲ್ಲವನ್ನೂ ಸಾಧಿಸಬಹುದೆಂದು ಕಲ್ಪಿಸಿಕೊಳ್ಳುವುದು ನನಗೆ ಕಷ್ಟ "ಎಂದು ಶಿಫ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಧ್ಯಕ್ಷ ಜೋ ಬಿಡೆನ್ ಮುಂದಿನ 24 ಗಂಟೆಗಳಲ್ಲಿ ಅಫ್ಘಾನಿಸ್ತಾನದಿಂದ ಸೇನಾ ವಾಪಸಾತಿ ಗಡುವು ಕುರಿತು ಮಾತುಕತೆ ನಡೆಸಿ, ಆಗಸ್ಟ್ 31 ರ ಗಡುವು ವಿಸ್ತರಿಸುವ ಬಗ್ಗೆ ನಿರ್ಧರಿಸುವ ನಿರೀಕ್ಷೆಯಿದೆ ಮತ್ತು ಈ ದಿನದ ವರ್ಚುವಲ್ ಜಿ 7 ನಾಯಕರ ಸಭೆಯಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸಬಹುದು ಎಂದು ಸೋಮವಾರ ವರದಿಯಾಗಿದೆ.