ಅಮೆರಿಕಾ: ಭಾರತೀಯ ಮೂಲದ ಸಾಫ್ಟವೇರ್ ಇಂಜಿನಿಯರ್ ಗೆ ಜೀವಾವಧಿ ಶಿಕ್ಷೆ
ಲಾಸ್ ಏಂಜಲೀಸ್, ನ.12: ಅಮೆರಿಕಾದಲ್ಲಿ ಪತ್ನಿ ಹಾಗೂ ತನ್ನ ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಭಾರತೀಯ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಉದ್ಯೋಗ ಕಳೆದುಕೊಂಡ ಕಾರಣ ಕುಟುಂಬದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಹತಾಶೆಯಿಂದ ಶಂಕರ ನಾಗಪ್ಪ ಹಂಗೂಡು ಎಂಬ 55 ವರ್ಷದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಈ ದುಷ್ಕೃತ್ಯಕ್ಕೆ ಶಿಕ್ಷೆಯಾಗಿ ಆತ ಸಾಯುವವರೆಗೂ ಜೈಲು ಶಿಕ್ಷೆ ಅನುಭವಿಸಬೇಕಿದೆ. ಮೂರು ವರ್ಷಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಂಕರ್ ನಾಗಪ್ಪ ತಪ್ಪೊಪ್ಪಿಕೊಂಡಿದ್ದರಿಂದ ಸ್ಥಳೀಯ ನ್ಯಾಯಾಲಯ ಆತನಿಗೆ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರೋಸ್‌ವಿಲ್ಲೆಯಲ್ಲಿ ಶಂಕರ್ ನಾಗಪ್ಪ, ಪತ್ನಿ ಜ್ಯೋತಿ (46), ಮಕ್ಕಳಾದ ವರುಣ್ (20), ಗೌರಿ (16) ಮತ್ತು ನಿಶ್ಚಲ್ (13) ಅವರೊಂದಿಗೆ ವಾಸವಾಗಿದ್ದರು. 2019ರಲ್ಲಿ ತನ್ನ ಫ್ಲಾಟ್‌ನಲ್ಲಿ ವಾರದ ಅವಧಿಯಲ್ಲಿ ನಾಲ್ವರನ್ನು ಆತ ಹತ್ಯೆ ನಡೆಸಿದ್ದ. ಅದೇ ವರ್ಷದ ಅಕ್ಟೋಬರ್ 7 ರಂದು ಜ್ಯೋತಿ, ಗೌರಿ ಹಾಗೂ ನಿಶ್ಚಲ್‌ನನ್ನು ತನ್ನ ಫ್ಲಾಟ್‌ನಲ್ಲಿ ಕೊಂದಿದ್ದ ಆರೋಪಿ, ಐದು ದಿನಗಳ ನಂತರ ವರುಣ್ ಶವದೊಂದಿಗೆ ಕಾರಿನಲ್ಲಿ ಬಂದು ಪೊಲೀಸರ ಮುಂದೆ ಶರಣಾಗಿ, ನಾಲ್ಕು ಕೊಲೆಗಳನ್ನು ತಾನೇ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದ, ಈ ಘಟನೆ ತಮಗೆ ತೀವ್ರ ದುಃಖ ತಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.