ಗುಂಡಿನ ದಾಳಿ: ಇಬ್ಬರ ಸಾವು, 14 ಮಂದಿಗೆ ಗಾಯ
ಓಸ್ಲೋ: ಜೂನ್ 25: ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ನೈಟ್‌ಕ್ಲಬ್‌ನಲ್ಲಿ ಮತ್ತು ಸಮೀಪದ ಬೀದಿಗಳಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ನಾರ್ವೆ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಒಬ್ಬ ವ್ಯಕ್ತಿಯನ್ನು ಅನುಮಾನಾಸ್ಪದ ಹಿನ್ನೆಲೆ ಬಂಧಿಸಲಾಗಿದೆ. ಗುಂಡಿನ ದಾಳಿ ಪ್ರಾರಂಭವಾದ ಕೆಲವು ನಿಮಿಷಗಳ ನಂತರ ಶಂಕಿತನನ್ನು ಬಂಧಿಸಲಾಯಿತು ಎಂದು ಪೊಲೀಸ್ ವಕ್ತಾರ ಟೋರ್ ಬಾರ್‌ಸ್ಟಾಡ್ ಪತ್ರಿಕೆ ಅಫ್ಟೆನ್‌ಪೋಸ್ಟನ್‌ಗೆ ತಿಳಿಸಿದರು.
ಓಸ್ಲೋದ ಮಧ್ಯಭಾಗದಲ್ಲಿರುವ ಲಂಡನ್ ಪಬ್ ಜನಪ್ರಿಯ ಸಲಿಂಗಕಾಮಿ ಬಾರ್ ಮತ್ತು ರಾತ್ರಿಕ್ಲಬ್ ಎಂಬ ಖ್ಯಾತಿ ಪಡೆದುಕೊಂಡಿದೆ. ಒಬ್ಬ ವ್ಯಕ್ತಿ ಬಂದಾಗ ಆತನ ಹತ್ತಿರ ಒಂದು ಬ್ಯಾಗ್ ಇತ್ತು. ಅವನು ಬ್ಯಾಗ್ ನಿಂದ ಬಂದೂಕನ್ನು ಎತ್ತಿಕೊಂಡು ಗುಂಡು ಹಾರಿಸಲು ಪ್ರಾರಂಭಿಸಿದನು ಎಂದು ಸಾರ್ವಜನಿಕ ಬ್ರಾಡ್‌ಕಾಸ್ಟರ್ ಎನ್ ಎಚ್ ಕೆಯ ಪತ್ರಕರ್ತ ಓಲಾವ್ ರೋನೆಬರ್ಗ್ ವರದಿ ಮಾಡಿದ್ದಾರೆ.
ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಓಸ್ಲೋ ಪೊಲೀಸ್ ಇಲಾಖೆ ಟ್ವೀಟ್ ನಲ್ಲಿ ತಿಳಿಸಿದೆ. 14 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರು ತೀವ್ರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.