ಹುಕ್ಕೇರಿ

ಇಂದಿನ ಯುವ ಪೀಳಿಗೆಗೆ ಅಧ್ಯಾತ್ಮದತ್ತ ಒಲವು ಕಡಿಮೆ ; ಶಿವಬಸವ ಸ್ವಾಮೀಜಿ ಅಸಮಾಧಾನ: ಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ

ಇಂದಿನ ಯುವ ಪೀಳಿಗೆಗೆ ಅಧ್ಯಾತ್ಮದತ್ತ ಒಲವು ಕಡಿಮೆ ; ಶಿವಬಸವ ಸ್ವಾಮೀಜಿ ಅಸಮಾಧಾನ: ಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ

ಲೋಕದರ್ಶನ ವರದಿ 


ಹುಕ್ಕೇರಿ 09: ಶಿವಲಿಂಗೇಶ್ವರ ವಿರಕ್ತಮಠ ಹಾಗೂ ಹಾವೇರಿಮಠದ ಪೀಠಾಧ್ಯಕ್ಷ ಲಿಂಗೈಕ್ಯ ಕುಮಾರ ಸ್ವಾಮಿಗಳ 14ನೇ ಪುಣ್ಯ ಸ್ಮರಣೆ ಹಾಗೂ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ  ಮಂಗಳವಾರ ದಿನಾಂಕ 9ರಂದು ಮುಂಜಾನೆ ಘೋಡಗೇರಿ ವಿರಕ್ತಮಠದ ಕಾಶಿನಾಥ ಸ್ವಾಮಿಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಾಗೂ ಅಕ್ಕಲಕೋಟದ ಚನ್ನಬಸವ ದೇವರುಗಳ ಸಾನಿಧ್ಯ, ಪೀಠಾಧ್ಯಕ್ಷ ಶಿವಬಸವ ಸ್ವಾಮಿಗಳ ನೇತೃತ್ವದಲ್ಲಿ ಜರುಗಿತು. ಅಖಿಲ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಧರ್ಮ ಧ್ವಜಾರೋಹಣ ಮಾಡಿದರು.  

         ಮುಖ್ಯ ಅತಿಥಿಗಳಾಗಿ ಅಖಿಲ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಹುಕ್ಕೇರಿ ತಾಲೂಕಾ ಘಟಕದ ಅಧ್ಯಕ್ಷೆ ಹೇಮಾ ಇಂಡಿ, ಪುರಸಭೆ ಉಪಾಧ್ಯಕ್ಷ ಆನಂದ ಗಂಧ ಹಾಗೂ ಉಪನ್ಯಾಸಕರಾಗಿ ಬೆಲ್ಲದ ಬಾಗೇವಾಡಿ ಭರತೇಶ ವಿದ್ಯಾಲಯದ ಎಸ್‌.ಬಿ.ಮುನ್ನೋಳಿ ಆಗಮಿಸಿದ್ದರು. ಪ್ರಾರಂಭದಲ್ಲಿ ವೇದಿಕೆಯ ಮೇಲಿನ ಪೂಜ್ಯರು ಹಾಗೂ ಅತಿಥಿಗಳು ಸಸಿಗೆ ಜಲಧಾರೆ ಎರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೃತ್ತ ಉಪನ್ಯಾಸಕ ಸಿ.ಜಿ.ಪಾಟೀಲ ಸ್ವಾಗತ, ನಿರೂಪಿಸಿ ಕೊನೆಗೆ ವಂದಿಸಿದರು.  

        ನೇತೃತ್ವ ವಹಿಸಿದ್ದ ಫೀಠಾಧ್ಯಕ್ಷ ಶಿವಬಸವ ಸ್ವಾಮಿಗಳು ಮಾತನಾಡಿ ಶೈಕ್ಷಣಿಕ ಹಾಗೂ ಧಾರ್ಮಿಕ ರಂಗಗಳಲ್ಲಿ ಮಠಮಾನ್ಯಗಳ ಪಾತ್ರ ಪ್ರಮುಖವಾಗಿದೆ. ಅವು ಅಧ್ಯಾತ್ಮಿಕ ಕೇಂದ್ರಗಳಾಗಿದ್ದು ಸಮಾಜ ಸುಧಾರಿಸುವ ಜವಾಬ್ದಾರಿ ಹೊಂದಿವೆ ಆದರೆ ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಅನುಕರಣೆಯತ್ತ ಆಕರ್ಷಿತರಾಗಿ  ಸಂಸ್ಕಾರವಿಲ್ಲದೆ ಅವರ ಭವಿಷ್ಯ ಮುಳುಗುವ ಢೋಣಿಯಂತಾಗಿರುವ ವಿಷಾದವನ್ನು ವ್ಯಕ್ತ ಪಡಿಸಿದರು. ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೇ ಸಂಸ್ಕಾರದ ಅವಶ್ಯಕತೆಯಿದೆಯೆಂದರು. 

        ರಾಜು ಗಸ್ತಿ, ಎಸ್‌.ಎಸ್‌.ಶೆಟ್ಟಿ, ಶಿವಾನಂದ ಜಿರ್ಲಿ, ಬಿ.ಎಂ.ಅಮ್ಮಣಗಿ, ದಯಾನಂದ ಅಮ್ಮಣಗಿ, ಬಾಬು ಬೆನವಾಡಿ, ಸುಹಾಸ ನೂಲಿ, ಅಪ್ಪುಶ ತುಬಚಿ, ಪಿಂಟು ಶೆಟ್ಟಿ, ಸರೋಜನಿ ಹುಂಡೇಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 

        ಅಖಿಲ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹಾಗೂ ಎಸ್‌.ಬಿ.ಮುನ್ನೋಳಿ ಮಾತನಾಡಿದ ನಂತರ ಘೋಡಗೇರಿ ವಿರಕ್ತಮಠದ ಕಾಶಿನಾಥ ಸ್ವಾಮಿಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಪೀಠಾಧ್ಯಕ್ಷರಾದ ಶಿವಬಸವ ಸ್ವಾಮಿಗಳು ಆಶೀರ್ವಚನ ನೀಡಿದರು. ಮಹಾಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.  

        ಸಂಜೆ 6.30ಕ್ಕೆ ವಚನ ಕಂಠಪಾಠ ಸ್ಫರ್ಧೆ ಹಾಗೂ ಬಹುಮಾನ ವಿತರಣೆ ನಂತರ ಹುಕ್ಕೇರಿಯ ಬನಶಂಕರಿ ಭರತ ನಾಟ್ಯ ಕ್ಲಾಸಿನ ವಿದ್ಯಾರ್ಥಿನಿಯರಿಂದ ಭರತ ನಾಟ್ಯ ಹಾಗೂ ಕಾಶೀನಾಥ ಸಂಸುದ್ದಿ ಗೋಕಾಕ ಕಲಾ ತಂಡದಿಂದ ಸಂಗೀತ ಸಂಜೆ  ಕಾರ್ಯಕ್ರಮ ನಡೆದವು. 


ಸುದ್ದಿ ಓದಿ