ಸೌಂದತ್ತಿ

ರಂಗಭೂಮಿಯು ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ: ಬಸ್ಮೆ

ರಂಗಭೂಮಿಯು ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ: ಬಸ್ಮೆ
ಸವದತ್ತಿಯ ಭಗೀರಥ ಸರ್ಕಲ್ ಹತ್ತಿರದ ರಂಗ ಆರಾಧನಾ ನಾಟಕ ಮನೆಯಲ್ಲಿ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್

ಸವದತ್ತಿ 30:  ರಂಗ ಭೂಮಿ ಕಲೆಗೆ ಯಾವುದೆ ಜಾತಿ, ಬಣ್ಣ, ಬಡವ ಶ್ರೀಮಂತ ಎಂಬ ಭಾವನೆಗಳಿಲ್ಲದಾಗಿದ್ದು, ಇಲ್ಲಿ ಎಲ್ಲವೂ ಒಂದೆಯಾಗಿರುವದರಿಂದ ಇದೊಂದು ಅತ್ಯಂತ ಶ್ರೇಷ್ಠವಾದ ಕಲೆಯಾಗಿದೆ ಎಂದು ಡಾ.ನಯನಾ ಬಸ್ಮೆ ಹೇಳಿದರು.

ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಇವರ ಸಂಯುಕ್ತ ಆಶ್ರಯದಲ್ಲಿ ಭಗೀರಥ ಸರ್ಕಲ್ ಹತ್ತಿರದ ರಂಗ ಆರಾಧನಾ ನಾಟಕ ಮನೆಯಲ್ಲಿ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಶಿಸಿ ಹೋಗುತ್ತಿರುವ ರಂಗಭೂಮಿ ಕಲೆಗೆ ರಂಗ ಆರಾಧನಾ ಸಂಸ್ಕೃತಿಕ ಸಂಘಟನೆಯವರು ಜೀವ ತುಂಬುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಸಮಾಜದ ನೈಜ ಸಂಗತಿಗಳನ್ನು ನಾಟಕದ ಮೂಲಕ ಪ್ರತಿಬಿಂಬಿಸುವ ರಂಗಭೂಮಿಯು ಇಂದು ಇನ್ನಷ್ಟು ಅಭಿವೃದ್ಧಿಯನ್ನು ಕಾಣಬೇಕಿದೆ ಎಂದರು.

ಝಕೀರ ನದಾಫ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇತಿಹಾಸ ಸಂಶೋಧಕ ಎ.ಬಿ.ವಗ್ಗರ ಮಾತನಾಡಿ, ರಂಗಭೂಮಿ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ ಎಂದರು. ಕಥೆ ಕಾದಂಬರಿಗಳನ್ನು ಓದಿ ಮನದಟ್ಟು ಮಾಡಿಕೊಳ್ಳುವದಕ್ಕಿಂತ ಅದು ರಂಗಭೂಮಿಯಲ್ಲಿ ನಾಟಕವಾಗಿ ಪ್ರದರ್ಶನಗೊಂಡರೆ ಅದರ ಮಹತ್ವವೇ ಬೇರೆಯಾಗಿರುತ್ತದೆ ಎಂದರು.

ರಂಗರ್ಮಿಗಳಾದ ಶರಣಬಸಪ್ಪ ಜಗಾಪೂರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಡಾ.ಮಹೇಶ ಮಟ್ಟಿ ಸಂದೇಶವಾಚನ ನೀಡಿದರು. ನ್ಯಾಯವಾದಿ ಎಮ್.ಎಮ್.ಯಲಿಗಾರ ಅಧ್ಯಕ್ಷತೆವಹಿಸಿದ್ದರು. ರಂಗರ್ಮಿಗಳಾದ ಶರಣಬಸಪ್ಪ ಜಗಾಪೂರ, ಮನೋಹರ ದೊಡಮನಿ ಹಾಗೂ ರಂಗಪೋಷಕ ಹಾಗೂ ನಿವೃತ್ತ ಶಿಕ್ಷಕ ಬಿ.ಬಿ.ಗೊರವನಕೊಳ್ಳರನ್ನು ಸನ್ಮಾನಿಸಲಾಯಿತು.

ರಂಗ ಆರಾಧನಾ ಸಂಘಟನೆ ಅಧ್ಯಕ್ಷ ಶ್ರೀನಿವಾಸ ಗದಗ ಸ್ವಾಗತಿಸಿದರು. ಶಿವಾನಂದ ತಾರೀಹಾಳ ನಿರೂಪಿಸಿದರು. ಅನೀಲ ಕಗದಾಳ ವಂದಿಸಿದರು.

ಮಾ.28ರಂದು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಸಂಜೆ 7 ಗಂಟೆಗೆ ಗಂಗಾಶಂಕರ ಮಂಗಲ ಕಾರ್ಯಾಲಯದಲ್ಲಿ ಟೂರಿಂಗ್ ಟಾಕೀಸ್ ಧಾರವಾಡ ಇವರಿಂದ ಉಮೇಶ ತೇಲಿ ರಚಿಸಿ ನಿರ್ದೇಶಿಸಿದ ಹುಚ್ಚರ ಸಂತೆ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.


ಸುದ್ದಿ ಓದಿ