ಕೋವಿಡ್ ಟೆಸ್ಟ್ ಮಾಡಲು ಮೂಗಿಗಿಂತ ಬಾಯಿ ಹೆಚ್ಚು ಯೋಗ್ಯ!
ಮೇರಿಲ್ಯಾಂಡ್/ಯುಎಸ್ಎ : ಜನೆವರಿ 15 ದೇಹದಲ್ಲಿ ಕೋವಿಡ್ ಪತ್ತೆಹಚ್ಚಲು
ವಿಶ್ವದೆಲ್ಲೆಡೆ ಹೆಚ್ಚಾಗಿ ನಮ್ಮ ಮೂಗಿನಲ್ಲಿರುವ ದ್ರವವನ್ನು ಬಳಸಲಾಗುತ್ತಿತ್ತು.
ಆರೋಗ್ಯ ಕಾರ್ಯಕರ್ತರು ಮೂಗಿನೊಳಗೆ ಸ್ವ್ಯಾಬ್ ಸ್ಟಿಕ್ ಗಳನ್ನು ಹಾಕಿ ಮಾದರಿಗಳನ್ನು
ಸಂಗ್ರಹಿಸಿ ಬಳಿಕ ಕೋವಿಡ್ ಪರೀಕ್ಷೆ ಮಾಡುತ್ತಿದ್ದರು. ಅಲ್ಲದೆ, ಜನರು ಮನೆಯಲ್ಲೇ ಈ
ರೀತಿಯ ಕ್ರಮಗಳನ್ನು ಕೈಗೊಂಡು ಕೋವಿಡ್ ಇದೆಯೋ ಇಲ್ಲವೋ ಅಂತಾ ಪರೀಕ್ಷೆ
ಮಾಡಿಕೊಳ್ಳುತ್ತಿದ್ದರು. ಇದು ಈಗಲೂ ಜಾರಿಯಲ್ಲಿದೆ. ಆದರೆ, ಇತ್ತೀಚಿನ ಪ್ರಯೋಗಗಳು
ಹೆಚ್ಚುತ್ತಿರುವ ಒಮೈಕ್ರಾನ್ ಪ್ರಕರಣಗಳ ಮಧ್ಯೆ ವೈರಸನ್ನು ಪತ್ತೆಹಚ್ಚಲು ಉತ್ತಮ
ಮಾರ್ಗವೆಂದರೆ ಮೂಗು ಅಲ್ಲ ಬಾಯಿ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ವೈರಸ್ ಕಾಣಿಸಿಕೊಳ್ಳುವುದು ಬಾಯಿ ಹಾಗೂ ಗಂಟಲಿನಲ್ಲಿ
ಕರೋನವೈರಸ್ ಮೊದಲು ಬಾಯಿ ಮತ್ತು ಗಂಟಲಿನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಮೇರಿಲ್ಯಾಂಡ್
ವಿಶ್ವವಿದ್ಯಾಲಯದ ಸಂಶೋಧಕ ಡಾ.ಡೊನಾಲ್ಡ್ ಮಿಲ್ಟನ್ ಸಂಶೋಧನೆ ನಡೆಸಿ ದೃಢಪಡಿಸಿದ್ದಾರೆ.
ಇದರರ್ಥ, ಇಲ್ಲಿಯವರೆಗೆ ಬಳಸುತ್ತಿದ್ದ ಕೊರೊನಾ ಪರೀಕ್ಷಾ ವಿಧಾನಗಳು ಹಲವು ಸಮಸ್ಯೆಗಳು
ಕಾಣಿಸಿಕೊಂಡಿವೆ. ಕೆಲವು ಸಂಶೋಧನೆಗಳು ವೈರಸ್ ಅನ್ನು ಆರಂಭಿಕ ದಿನಗಳಲ್ಲಿ ಮೂಗಿನ
ಬದಲಿಗೆ ಬಾಯಿಯ ದ್ರವ್ಯದಿಂದ ಪತ್ತೆ ಹಚ್ಚಲು ಸಾಧ್ಯ ಎಂದು ಪರಿಗಣಸಿವೆ.
ಬಾಯಿಯಿಂದ ತೆಗೆದ ಮಾದರಿ 12 ಪಟ್ಟು ಉತ್ತಮ
ಡಾ. ಮಿಲ್ಟನ್ ಮತ್ತು ಅವರ ತಂಡವು ಕೊರೊನಾ ಪರೀಕ್ಷೆಯ ಉತ್ತಮ ವಿಧಾನ ಯಾವುದು ಅನ್ನೋದರ
ಬಗ್ಗೆ ಸಂಶೋಧನೆ ನಡೆಸಿತು. ಇದಕ್ಕಾಗಿ ವಿಜ್ಞಾನಿಗಳ ತಂಡ ರೋಗಲಕ್ಷಣಗಳು ಕಾಣಿಸಿಕೊಂಡ
ಕೊರೊನಾ ರೋಗಿಗಳ ಮೂಗು ಮತ್ತು ಬಾಯಿಯಿಂದ ಸ್ವ್ಯಾಬ್ ಅನ್ನು ತೆಗೆದುಕೊಂಡರು. ಈ ಬಗ್ಗೆ
ಸಂಶೋಧನೆ ನಡೆಸಿ ಮೂಗಿಗಿಂತ ಮೂರು ಪಟ್ಟು ಹೆಚ್ಚು ವೈರಸ್ ಬಾಯಿಯಲ್ಲಿ ಇರುವುದು
ಕಂಡುಬಂದಿದೆ. ಅಲ್ಲದೆ, ಬಾಯಿಯಿಂದ ತೆಗೆದ ಮಾದರಿಗಳು ಕೊರೊನಾ ಪಾಸಿಟಿವಿಟಿ ರೇಟ್
ಹೆಚ್ಚು ಇರುವುದನ್ನು ದೃಢಪಡಿಸಿವೆ. ಮೂಗಿನೊಂದಿಗೆ ಹೋಲಿಕೆ ಮಾಡಿದಾಗ ಬಾಯಿ ಅಥವಾ
ಗಂಟಲಿನ ಪರೀಕ್ಷೆ 12 ಪಟ್ಟು ಹೆಚ್ಚು ಪಾಸಿಟಿವಿಟಿಯನ್ನು ನಿಖರವಾಗಿ ಹೇಳಿದೆ.
ಒಮೈಕ್ರಾನ್ ತಡೆಗಟ್ಟಲು ಲಾಲಾರಸ ಪರೀಕ್ಷೆ ಅಗತ್ಯ
ಡಾ. ರಾಬಿ ಸಿಕ್ಕಾ ಹೇಳಿಕೆ ಪ್ರಕಾರ, ಒಮೈಕ್ರಾನ್ ಅಲೆಯ ಮಧ್ಯೆ ಕೊರೊನಾ ಪರೀಕ್ಷೆಯ
ವಿಧಾನ ಬದಲಾಯಿಸಬೇಕಾಗಿದೆ. ಈ ರೂಪಾಂತರವು ವೇಗವಾಗಿ ದ್ವಿಗುಣಗೊಳ್ಳುತ್ತದೆ. ಹಾಗೂ
ದೇಹದಲ್ಲಿ ತ್ವರಿತವಾಗಿ ಹರಡುತ್ತದೆ. ಅಲ್ಲದೆ, ಹೆಚ್ಚಿನ ಸಂದರ್ಭಗಳಲ್ಲಿ ರೋಗ ಲಕ್ಷಣ
ಉಂಟು ಮಾಡದೆ ದೇಹದಿಂದ ಹೋಗಿಬಿಡುತ್ತವೆ. ಆದ್ದರಿಂದ, ಮೂಗಿನ ಬದಲಿಗೆ ರೋಗಿಗಳ
ಲಾಲಾರಸವನ್ನು ಪರೀಕ್ಷಿಸುವುದು ಅವಶ್ಯಕ. ಇನ್ನು ಕೆಲವ ಪ್ರಕಾರ ಒಮೈಕ್ರಾನ್ ಗಂಟಲು ಹಾಗೂ
ಬಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ದ್ವಿಗುಣಗೊಳ್ಳುತ್ತದೆ. ಆದರೆ, ಸದ್ಯಕ್ಕೆ ಇದನ್ನು
ಇನ್ನೂ ಖಚಿತಪಡಿಸಲು ಸಾಧ್ಯವಾಗಿಲ್ಲ.
ಡೆಲ್ಟಾ ರೂಪಾಂತರಿಗೆ ಮೂಗು ದ್ರವ್ಯ ಒಳ್ಳೆಯದು
ಇನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಇತ್ತೀಚಿನ ಸಂಶೋಧನೆ ಪ್ರಕಾರ ಮೂಗಿನ ಮಾದರಿಗಳು
ಡೆಲ್ಟಾ ರೂಪಾಂತರಗಳನ್ನು ಪತ್ತೆಹಚ್ಚಲು ಹೆಚ್ಚು ಯೋಗ್ಯ ಎಂದಿದ್ದಾರೆ. ಆದ್ರೆ
ಒಮೈಕ್ರಾನ್ ತಳಿ ಪ್ರಕರಣಗಳು ತಜ್ಞರ ಎಲ್ಲ ಸಂಶೋಧನೆಯನ್ನು ಉಲ್ಟಾಪಲ್ಟಾ ಮಾಡುತ್ತಿವೆ.
ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತನ್ನ ಸಂಶೋಧನೆಯೊಂದರಲ್ಲಿ ಕೊರೊನಾ
ಸೋಂಕು ಕಾಣಿಸಿಕೊಂಡ ಬಳಿಕ ವೈರಸ್ ಮೂಗಿನಲ್ಲಿ ಹೆಚ್ಚು ಸಂಗ್ರಹಗೊಳ್ಳುತ್ತದೆ ಎಂದು
ಕಂಡುಹಿಡಿದಿದೆ. ಇದರರ್ಥ, ಆರಂಭಿಕ ದಿನಗಳಲ್ಲಿ ಬಾಯಿಯಲ್ಲಿ ವೈರಸ್ ಸುಲಭವಾಗಿ
ಪತ್ತೆಹಚ್ಚಬಹುದಾದರೂ, ಸ್ವಲ್ಪ ಸಮಯದ ನಂತರ ಮೂಗನ್ನು ಪರೀಕ್ಷಿಸುವುದು ಅವಶ್ಯಕ ಎಂದಿದೆ.
ಬಾಯಿ ಉಷ್ಣಾಂಶ ಒಂದೇ ರೀತಿ ಇರಲ್ಲ
ಡಾ. ಜೋಸೆಫ್ ಡೆರಿಸಿ ಪ್ರಕಾರ, ಬಾಯಿಯಲ್ಲಿ ಉಷ್ಣಾಂಶ ಎಂದಿಗೂ ಒಂದೇ ಆಗಿರುವುದಿಲ್ಲ.
ಕೆಲವೊಮ್ಮೆ ಅದು ಶುಷ್ಕವಾಗಿದ್ದರೆ, ಕೆಲವೊಮ್ಮೆ ತೇವವಾಗಿರುತ್ತದೆ. ಕೆಲವೊಮ್ಮೆ ಇದು
ಹೆಚ್ಚು ಆಮ್ಲೀಯದಿಂದ ಕೂಡಿರುತ್ತದೆ. ಇದು ವೈರಸ್ ಪರೀಕ್ಷೆಯನ್ನು ಕಷ್ಟಕರವಾಗಿಸುತ್ತದೆ.
ಮೂಗಿನಲ್ಲಿ ಇಂತಹ ಬದಲಾವಣೆ ತೀರಾ ಕಡಿಮೆ ಹಾಗೂ ಯೋಗ್ಯ ಎಂದು ಜೋಸೆಫ್ ಡೆರಿಸ್
ಹೇಳುತ್ತಾರೆ.