ಕುವೈತ್ ಸರ್ಕಾರದ ನಿರ್ಧಾರ …. ನೆಮ್ಮದಿಯ ನಿಟ್ಟುಸಿರುಬಿಟ್ಟ ವಿದೇಶಿ ಪ್ರಯಾಣಿಕರು
ಕುವೈತ್, ಜ 18 -ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ 72 ಗಂಟೆಗಳ ಕಡ್ಡಾಯ ಕ್ವಾರಂಟೈನ್ ನಿಬಂಧನೆಯನ್ನು ಇದೀಗ ಕುವೈತ್ ಸಂಪುಟ ರದ್ದುಗೊಳಿಸಿದೆ. ವಿಮಾನ ನಿಲ್ದಾಣ ಪ್ರವೇಶಿಸಿದ ತಕ್ಷಣ ಪಿ ಸಿ ಆರ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಯಾವುದೇ ಕ್ವಾರಂಟೈನ್ ಇರುವುದಿಲ್ಲ. ಈ ಸಂಬಂಧ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಆದೇಶ ಹೊರಡಿಸಿದೆ. ವಿದೇಶದಿಂದ ಬರುವ ಪ್ರಯಾಣಿಕರು ಪಿಸಿಆರ್ ಪರೀಕ್ಷೆ ನಡೆಸಿದ ನಂತರ ತಕ್ಷಣವೇ ಕ್ವಾರಂಟೈನ್ ಕೊನೆಗೊಳಿಸಬಹುದು ಎಂದು ಹೇಳಲಾಗಿದೆ.
ಮತ್ತೊಂದುಕಡೆ, ಕುವೈತ್‌ನಲ್ಲಿ ನಿತ್ಯ ಕೊರೊನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಸೋಮವಾರ ದೇಶದಾದ್ಯಂತ 5,147 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ಅಲ್ಲದೆ, ಕಳೆದ 24 ಗಂಟೆಗಳಲ್ಲಿ ಒಬ್ಬರು ಕೋವಿಡ್ ಬಲಿಯಾಗಿದ್ದಾರೆ. ಈವರೆಗೆ ಕುವೈತ್‌ನಾದ್ಯಂತ 4,70,478 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, 4,24,645 ಮಂದಿ ಗುಣಮುಖಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಅಬ್ದುಲ್ಲಾ ಅಲ್ ಸನದ್ ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 2,477ತಲುಪಿದ್ದು, ಪ್ರಸ್ತುತ ಐಸಿಯುನಲ್ಲಿ 33 ಜನರಿದ್ದು, 43,356 ಸಕ್ರಿಯ ಪ್ರಕರಣಗಳಿವೆ.