ಪ್ರವಾಸ ನಿರ್ಬಂಧ ತೆರವುಗೊಳಿಸಲಿರುವ ಅಮೆರಿಕ
ವಾಷಿಂಗ್ಟನ್, ಅ ೧೬: ಸಂಪೂರ್ಣವಾಗಿ ಲಸಿಕೆ ಪಡೆದ ವಿದೇಶಿ ಪ್ರಜೆಗಳಿಗೆ ಬರುವ ತಿಂಗಳ ೮ ರಿಂದ ಅನ್ವಯವಾಗುವಂತೆ ಎಲ್ಲ ಪ್ರವಾಸ ನಿರ್ಬಂಧಗಳನ್ನು ಅಮೆರಿಕ ತೆರವುಗೊಳಿಸಿರುವುದಾಗಿ ಪ್ರಕಟಿಸಿದೆ. ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿ ಕೆವಿನ್ ಮುನೋಜ್ ತಮ್ಮ ಟ್ವಿಟರ್‌ನಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ, ಕಠಿಣ ನಿಯಮ ಪಾಲನೆ ಮತ್ತು ಬದ್ಧತೆಯೊಂದಿಗೆ ನೀತಿಯನ್ನು ರೂಪಿಸಲಾಗಿದೆ. ಹೊಸ ನೀತಿಯಲ್ಲಿ ಪ್ರಯಾಣಿಕರು ವಿಮಾನ ಹತ್ತುವ ಮುನ್ನ ಕೊರೊನಾ ಪರೀಕ್ಷೆಯ ನೆಗೆಟಿವ್ ವರದಿ ಮತ್ತು ಎರಡು ಲಸಿಕೆಗಳನ್ನು ಪಡೆದಿರುವ ದಾಖಲೆಗಳನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಹೇಳಿದರು. ಈ ನಿಯಮ ಭಾರತ ಸೇರಿದಂತೆ ೩೩ ರಾಷ್ಟ್ರಗಳಿಗೆ ಅನ್ವಯವಾಗಲಿದೆ. ಅಲ್ಲದೆ ಮುಂಬರುವ ಜನವರಿಯಿಂದ ಅಮೆರಿಕದ ಗಡಿ ಪ್ರದೇಶಗಳಿಗೆ ಭೇಟಿ ನೀಡುವ ವಿದೇಶಿ ಪ್ರಜೆಗಳು ಕೂಡ ಕಡ್ಡಾಯವಾಗಿ ಸಂಪೂರ್ಣವಾಗಿ ಲಸಿಕೆ ಪಡೆದಿರಬೇಕು ಎಂದು ತಿಳಿಸಿದ್ದಾರೆ.