ಕಾಶ್ಮೀರ ಗಡಿ ಶಾಂತಿಯುತವಾಗಿದೆ, ಚಿಂತೆಬೇಡ; ಲೆಫ್ಟಿನೆಂಟ್ ಜನರಲ್ ಪಾಂಡೆ
ಬಾರಾಮುಲ್ಲ, ಸೆ 27: ಕಾಶ್ಮೀರ ಗಡಿಯಲ್ಲಿನ ನಿಯಂತ್ರಣ ರೇಖೆಯ (ಎಲ್‌ಒಸಿ) ಪರಿಸ್ಥಿತಿಯು ಶಾಂತಿಯುತವಾಗಿದೆ. ಯಾವುದೇ ಘಟನೆಯನ್ನು ಎದುರಿಸಲು ಸೈನ್ಯವು ಸಿದ್ಧರಾಗಿರುವುದರಿಂದ ಜನರು ಚಿಂತಿಸಬೇಕಾಗಿಲ್ಲ ಸೇನೆಯ ಉನ್ನತ ಕಮಾಂಡರ್ ಸೋಮವಾರ, ಭರವಸೆ ನೀಡಿದ್ದಾರೆ.
ಉತ್ತರ ಕಾಶ್ಮೀರ ಜಿಲ್ಲೆಯ ಆರ್ಮಿ ಗುಡ್‌ವಿಲ್ ಸ್ಕೂಲ್ ಬೋನಿಯಾರ್‌ನಲ್ಲಿ ನಡೆದ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) 15 ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ, ಎಲ್‌ಒಸಿಯಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಸಣ್ಣಪುಟ್ಟ ಘಟನೆಗಳು ಸಂಭವಿಸುತ್ತಿರುತ್ತವೆ. ಆದರೆ, ಎಲ್‌ಒಸಿಯಲ್ಲಿ ಯಾವುದೇ ಘಟನೆ ನಡೆದರೂ ಎದುರಿಸಲು ಯೋಧರು ಸಿದ್ಧರಿದ್ದಾರೆ. ಎಲ್‌ಒಸಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಕಾಶ್ಮೀರದ ಜನರು ಚಿಂತಿಸಬೇಕಾಗಿಲ್ಲ ಎಂದರು.
ಉತ್ತರ ಕಾಶ್ಮೀರ ಜಿಲ್ಲೆಯ ಕುಪ್ವಾರಾದ ತೀತ್ವಾಲ್ ಸೆಕ್ಟರ್‌ನಲ್ಲಿನ ಎಲ್‌ಒಸಿ ಬಳಿ ಪಾಕಿಸ್ತಾನದ ಸೈನಿಕರು ಕದನ ವಿರಾಮವನ್ನು ಉಲ್ಲಂಘಿಸಿದ ನಂತರ ಸೇನೆಯ ಉನ್ನತ ಕಮಾಂಡರ್ ಭರವಸೆ ನೀಡಿದ್ದಾರೆ. ಸುಮಾರು 10 ರಿಂದ 15 ನಿಮಿಷಗಳ ಕಾಲ ಪಾಕ್ ಸೇನೆ ಶೆಲ್ ದಾಳಿ ನಡೆಸಿತ್ತು. ಇದು ಈ ವರ್ಷ ಫೆಬ್ರವರಿಯ ನಂತರ ಕಣಿವೆಯಲ್ಲಿ ಪಾಕಿಸ್ತಾನ ಸೇನೆಯ ಮೊದಲ ಕದನ ವಿರಾಮ ಉಲ್ಲಂಘನೆಯಾಗಿದೆ.
2020ರ ಫೆಬ್ರವರಿ 25ರಂದು ಭಾರತ ಮತ್ತು ಪಾಕಿಸ್ತಾನದ ಸೇನೆಗಳು 2003ರ ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿದ್ದು, ನಿಯಂತ್ರಣ ರೇಖೆಯಾದ್ಯಂತ ಗುಂಡಿನ ದಾಳಿ ನಿಲ್ಲಿಸುವುದಾಗಿ ಘೋಷಿಸಿದವು.
ಆದಾಗ್ಯೂ, ಕಳೆದ ಒಂದು ವಾರದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಯಿಂದ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದ ಭಾರತೀಯ ಸೈನ್ಯದೊಂದಿಗೆ ನಿಯಂತ್ರಣ ರೇಖೆಯಾದ್ಯಂತ ಚಟುವಟಿಕೆಗಳಲ್ಲಿ ಹೆಚ್ಚಳ ಕಂಡುಬಂದಿದೆ.
ಉತ್ತರ ಕಾಶ್ಮೀರ ಜಿಲ್ಲೆಯ ಬಾರಾಮುಲ್ಲಾದ ಉರಿ ಸೆಕ್ಟರ್‌ನಲ್ಲಿ ಕಳೆದ ವಾರ ಎಲ್‌ಒಸಿಯ ಈ ಭಾಗದಲ್ಲಿ ನುಸುಳಲು ಯಶಸ್ವಿಯಾದ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಸೆಪ್ಟೆಂಬರ್ 23 ರಂದು ಹಟ್ಲಾಂಗಾ ಪೋಸ್ಟ್ ಬಳಿ ಉರಿ ಸೆಕ್ಟರ್‌ನ ಎಲ್‌ಒಸಿಯಲ್ಲಿ ನಡೆದ ಎನ್ಕೌಂಟರ್‌ನಲ್ಲಿ ಇಬ್ಬರು ನುಸುಳುಕೋರರು ಸಾವನ್ನಪ್ಪಿದರು ಮತ್ತು ಮೂವರು ಸೈನಿಕರು ಗಾಯಗೊಂಡಿದ್ದರು.