ಥ್ಯಾಂಕ್ಸ್ ಟು ಇಂಡಿಯಾ.. ಕೋವಿಡ್ ಲಸಿಕೆ ಪೂರೈಸಿದ್ದಕ್ಕಾಗಿ ಹಲವು ದೇಶಗಳಿಂದ ಕೃತಜ್ಞತೆ
ವಿಶ್ವಸಂಸ್ಥೆ, ಸೆ 30: ಕೊರೊನಾ ವಿರುದ್ಧದ ಹೋರಾಟದಲ್ಲಿ ಸರಿಯಾದ ಸಮಯದಲ್ಲಿ ಕೋವಿಡ್ ಲಸಿಕೆ ಡೋಸ್ ಗಳನ್ನು ಪ್ರಪಂಚದ ಹಲವು ದೇಶಗಳಿಗೆ ಪೂರೈಸಿದ್ದಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ವಿವಿಧ ದೇಶಗಳು ಭಾರತಕ್ಕೆ ಧನ್ಯವಾದ ಸಲ್ಲಿಸಿವೆ.
ಸೆಪ್ಟೆಂಬರ್ 21–27ರವರೆಗೆ ನಡೆದ ಅಧಿವೇಶನದಲ್ಲಿ ವಿವಿಧ ದೇಶಗಳ ಮುಖ್ಯಸ್ಥರು ಭಾರತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಲಸಿಕೆ ಡೋಸ್ ಗಳ ಪೂರೈಕೆಯ ಜೊತೆಗೆ ಇತರ ತುರ್ತು ಔಷಧಿಗಳನ್ನು ವಿತರಿಸಿದ್ದಕ್ಕಾಗಿ ಭಾರತಕ್ಕೆ ಎಂದೆಂದಿಗೂ ಋಣಿಯಾಗಿರುತ್ತೇವೆ ಎಂದು ಈ ದೇಶಗಳು ಹೇಳಿವೆ.
ನೈಜೀರಿಯಾ, ಘಾನಾ, ಫಿಜಿ, ಡೊಮಿನಿಕಾ, ನೇಪಾಳ, ಭೂತಾನ್ ಮೊದಲಾದ ದೇಶಗಳ ನಾಯಕರು ಭಾರತ ನೆರವನ್ನು ಪ್ರಶಂಶಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮದ ಭಾಗವಾಗಿ ಭಾರತ 100 ಕ್ಕೂ ಹೆಚ್ಚು ದೇಶಗಳಿಗೆ 6.6 ಕೋಟಿ ಲಸಿಕೆ ಡೋಸ್ ರಫ್ತು ಮಾಡಿದೆ. ಏಪ್ರಿಲ್ ನಲ್ಲಿ ಕೊರೊನಾ ಎರಡನೇ ಅಲೆ ತೀವ್ರಗೊಂಡಂತೆ ರಫ್ತುಗಳನ್ನು ಸ್ಥಗಿತಗೊಳಿಸಿತ್ತು. ಮತ್ತೆ ಅಕ್ಟೋಬರ್ ನಿಂದ ಲಸಿಕೆಗಳ ರಫ್ತುಗಳ ಪುನರಾರಂಭಿಸಲಾಗುವುದು ಎಂದು ಕ್ವಾಡ್ ಸಮ್ಮೇಳನದಲ್ಲಿ ಭಾರತ ಘೋಷಿಸಿದೆ. ಭಾರತದ ಸಹಕಾರವಿಲ್ಲದೆ ವಿಶ್ವದ ಹಲವು ಭಾಗಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿರಲಿಲ್ಲ ಎಂದು ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿ ಶ್ಲಾಘಿಸಿದ್ದಾರೆ. ಸೀರಮ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಕೊವ್‌ಶೀಲ್ಡ್ ಲಸಿಕೆಗೆ ಬ್ರಿಟನ್ ಮಾನ್ಯತೆ ಕಲ್ಪಿಸದಿರುವ ಬಗ್ಗೆ ಹಲವು ರಾಷ್ಟ್ರಗಳ ಮುಖ್ಯಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಮತ್ತೊಂದೆಡೆ, ಭಾರತ ಲಸಿಕೆ ರಫ್ತು ಪುನರಾರಂಭಿಸುವ ನಿರ್ಧಾರವನ್ನು ಅಮೆರಿಕದ ರಿಪಬ್ಲಿಕನ್ ಪಕ್ಷದ ಸೆನೆಟರ್ ಸ್ವಾಗತಿಸಿದ್ದಾರೆ. ಅಂತಾರಾಷ್ಟ್ರೀಯ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಸೆನೆಟರ್ ಜಿರ್ಜ್ ರಿಶ್ ಹೇಳಿದ್ದಾರೆ.