ಸೌಂದತ್ತಿ

ಶಿಕ್ಷಕರು ಪ್ರಾಮಾಣಿಕ ಸೇವೆ ಮಾಡಿದರೆ ಗೌರವ: ಅಸುಂಡಿ

ಶಿಕ್ಷಕರು ಪ್ರಾಮಾಣಿಕ ಸೇವೆ ಮಾಡಿದರೆ ಗೌರವ: ಅಸುಂಡಿ

ಸವದತ್ತಿ 12: ಶಿಕ್ಷಕರು ಪ್ರಾಮಾಣಿಕ ಹಾಗೂ ಕರ್ತವ್ಯ ಪ್ರಜ್ಞೆಯಿಂದ ತಮ್ಮ ಸೇವೆಯನ್ನು ಮಾಡಿದ್ದೆ ಆದಲ್ಲಿ ಸಮಾಜ ಹಾಗೂ ವಿದ್ಯಾರ್ಥಿಗಳು ಶಿಕ್ಷಕರಿಗೆ ಆತ್ಮೀಯ ಗೌರವವನ್ನು ನೀಡುತ್ತಾರೆ ಎಂಬುದಕ್ಕೆ ಇಂದಿನ ಗುರುವಂದನಾ ಕಾರ್ಯಕ್ರಮ ಮಾದರಿಯಾಗಿದೆ ಎಂದು ನಿವೃತ್ತ ಶಿಕ್ಷಕ ಎಮ್‌.ಎಸ್‌.ಅಸುಂಡಿ ಹೇಳಿದರು. 

ಸ್ಥಳೀಯ ವಡಿಯರ ಕಲ್ಯಾಣ ಮಂಟಪದಲ್ಲಿ 1985-86ನೇ ಸಾಲಿನ ಎಸ್‌.ಎಸ್‌.ಎಲ್‌.ಸಿಯ ಕುಚುಕು ಗೆಳೆಯರ ಬಗಳದವರು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಶಿಕ್ಷಕರ ನಿವೃತ್ತಿ ಜೀವನ ಗೃಹ ಬಂಧನದಂತ ಬದುಕಾಗಿದ್ದು, ಇಂದು ಹಳೆಯ ವಿದ್ಯಾರ್ಥಿಗಳು ನಮ್ಮಲ್ಲಿರುವ ಗೃಹ ಬಂಧನದ ಆತಂಕವನ್ನು ದೂರ ಮಾಡಿ ಮತ್ತೆ ನಮಗೆ ನವ ಚೈತನ್ಯವನ್ನು ನೀಡಿದ್ದಾರೆ ಎಂದರು. 35 ವರ್ಷಗಳ ನಂತರ 52ರ ವಯೋಮಾನದಲ್ಲಿರುವ ನನ್ನ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ವೈದ್ಯರಾಗಿ, ವಕೀಲರಾಗಿ, ಪತ್ರಕರ್ತರಾಗಿ, ಶಿಕ್ಷಕರಾಗಿ, ವ್ಯಾಪಾರೋದ್ಯಮಿಗಳಾಗಿ ಹಾಗೂ ಅನೇಕ ರಂಗಗಳಲ್ಲಿ ಉನ್ನತ ಸ್ಥಾನದಲ್ಲಿರುವುದು ಖುಷಿ ತಂದಿದೆ ಎಂದರು. 

ನಿವೃತ್ತ ಗುರುಗಳಾದ ಎಫ್‌.ಎಮ್‌.ನಿಶಾನದಾರ ಮಾತನಾಡಿ, ನನ್ನ ಹಳೆಯ ವಿದ್ಯಾರ್ಥಿಗಳು ಇಂದು ಹಮ್ಮಿಕೊಂಡಂತ ಕಾರ್ಯಕ್ರಮದಲ್ಲಿ ಅವರಲ್ಲಿರುವ ಶಿಸ್ತು ಮತ್ತು ಅಚ್ಚುಕಟ್ಟತೆಯ ವ್ಯವಸ್ಥೆಯನ್ನು ಗಮನಿಸಿದಾಗ ಶಿಕ್ಷಕರಾಗಿ ನಾವು 35 ವರ್ಷದ ಹಿಂದೆ ನೀಡಿದ ಶಿಕ್ಷಣ ಇಂದು ಸಾರ್ಥಕತೆಯತ್ತ ಸಾಗಿದೆ ಎಂಬ ಆತ್ಮ ತೃಪ್ತಿ ಇದೆ ಎಂದರು. 

ನಿವೃತ್ತ ಶಿಕ್ಷಕಿ ಪಿ.ಬಿ.ಬಾಳಿಪಡಿ ಮಾತನಾಡಿ, ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧ ಜೀವನದುದ್ದಕ್ಕೂ ಮರೆಯುವಂತ ವಿಷಯವಲ್ಲದಾಗಿದ್ದು, ಗುರುವಿನ ಮುಂದೆ ವಿದ್ಯಾರ್ಥಿ ಉನ್ನತಮಟ್ಟಕ್ಕೇರಿದಾಗ ಆಗುವ ಸಂತೋಷ ಹೇಳಲಸಾಧ್ಯ ಎಂದರು. 

ನಿವೃತ್ತ ಗುರುಗಳಾದ ಬಿ.ಬಿ.ಗೊರವನಕೊಳ್ಳ, ಎಮ್‌.ಎಸ್‌.ಅಸುಂಡಿ, ಎಫ್‌.ಎಮ್‌.ನಿಶಾನದಾರ, ಪಿ.ಬಿ.ಬಾಳಿಪಡಿ, ಎಸ್‌.ಕೆ ಹೈಸ್ಕೂಲ್ ಪ್ರಾಚಾರ್ಯ ವಿ.ಆರ್‌.ಲೋಹಾರ, ಬಿ.ಪಿ.ಪ್ರಭುನವರನ್ನು ಕುಚುಕು ವಿದ್ಯಾರ್ಥಿ ಬಳಗದವರು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು. 

ಎಸ್‌.ಎಸ್‌.ಎಲ್‌.ಸಿಯ 1985-86ನೇ ಸಾಲಿನ ವಿದ್ಯಾರ್ಥಿ ಬಳಗದವರು ಎಸ್‌.ಕೆ.ಹೈಸ್ಕೂಲಿಗೆ ಗುರುವಂದನಾ ಸ್ಮರಣಿಕೆಯಾಗಿ ಡಯಾಸ್ ನೀಡಿದರು. 

ಜುಲೈ ತಿಂಗಳು ಕನ್ನಡ ಪತ್ರಿಕಾ ಮಾಸಾಚರಣೆಯಾಗಿರುವ ಹಿನ್ನೆಲೆಯಲ್ಲಿ ಕುಚುಕು ಗೆಳೆಯರ ಬಳಗದವರು ಎಲ್ಲ ಪತ್ರಿಕಾ ಮಿತ್ರರನ್ನು ಹಾಗೂ ಕೊರೊನಾ ವಾರಿಯರ್ಸರಾಗಿ ರೋಗಿಗಳ ಸೇವೆ ಮಾಡಿದ ಡಾ.ವಿಜಯ ನರಗುಂದ ಹಾಗೂ ಡಾ.ಕುಮಾರ ಎತ್ತಿನಮಠರನ್ನು ಸನ್ಮಾನಿಸಿ ಗೌರವಿಸಿದರು. 

ಹಳೆಯ ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ಎಸ್‌.ಕೆ.ಹೈಸ್ಕೂಲ್‌ನಲ್ಲಿ ಸಸಿ ನೆಡುವ ಮೂಲಕ ಮನಮಹೋತ್ಸವ ಆಚರಿಸಿ ತಮ್ಮ ಹಳೆಯ ನೆನಪುಗಳನ್ನು ಸವಿದರು. ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗೆಳೆಯರಿಗೆ ನೆನಪಿನ ಕಾಣಿಕೆಯಾಗಿ ಒಂದು ಟ್ರಾವಲಿಂಗ್ ಬ್ಯಾಗ ಜೊತೆಗೆ ಒಂದು ಸಸಿ ನೀಡಲಾಯಿತು. 

ಬಸವರಾಜ ತುರಮರಿ ಪ್ರಾಸ್ಥಾವಿಕವಾಗಿ ಮಾತನಾಡಿದರು. 

ಸೋಮಲಿಂಗಯ್ಯ ವಡಿಯರ, ಗೀರೀಶ ಹಂಪಣ್ಣವರ, ಪುಂಡಲೀಕ ಬಾಳೋಜಿ, ರಾಜು ಪತ್ತಾರ, ಮಹಾಂತೇಶ ರಣಗಟ್ಟಿಮಠ, ಗುರು ಕಾಗಲಕರ, ಶಿವಾನಂದ ಹಿರೇಮಠ, ರಾಜೀವ ಕುಲಕರ್ಣಿ, ಮಂಜುನಾಥ ಗಾಂಡೊಳಿ, ಗಣಪತಿ ಲಾಡರ, ಸದಾನಂದ ಕರಿಗೌಡರ, ಸಂಜು ಪತ್ತೆಪುರ, ಫಕ್ಕೀರ​‍್ಪ ಅಮಾತೆನ್ನವರ, ಗುರು ಕಾಗಲಕರ, ಸುರೇಶ ಬಿಕ್ಕಣ್ಣವರ, ಪ್ರಭು ಹುಲಮನಿ ಹಾಗೂ ಕುಚುಕು ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.  

ಶ್ರೀಕಾಂತ ಜೋಶಿ ಸ್ವಾಗತಿಸಿದರು. ಶಿವಾನಂದ ಹಿರೇಮಠ ಹಾಗೂ ಎಮ್‌.ಪಿ.ಪಾಟೀಲ ನಿರೂಪಿಸಿದರು. ಪ್ರಸನ್ನ ದೀಕ್ಷಿತ ವಂದಿಸಿದರು. 




ಸುದ್ದಿ ಓದಿ