ಟಿ20 ವಿಶ್ವಕಪ್; ಗಾಯಗೊಂಡಿರುವ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿಗೆ ಸ್ಥಾನ
ನವದೆಹಲಿ: ಅಕ್ಟೋಬರ್ 14: ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗುವ ಟಿ20 ವಿಶ್ವಕಪ್ 2022 ಗಾಗಿ 15 ಸದಸ್ಯರ ಭಾರತೀಯ ಕ್ರಿಕೆಟ್ ತಂಡದಲ್ಲಿ ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ.
“ಭಾರತದ ಐಸಿಸಿ ಪುರುಷರ T20 ವಿಶ್ವಕಪ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ ಹೆಸರಿಸಿದೆ. ಶಮಿ ಆಸ್ಟ್ರೇಲಿಯಾ ತಲುಪಿದ್ದಾರೆ ಮತ್ತು ಅಭ್ಯಾಸ ಪಂದ್ಯಗಳಿಗೆ ಮುಂಚಿತವಾಗಿ ಬ್ರಿಸ್ಬೇನ್ನಲ್ಲಿರುವ ತಂಡದೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ” ಎಂದು ಬಿಸಿಸಿಐ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ
ಮೊಹಮ್ಮದ್ ಶಮಿ ಆರಂಭದಲ್ಲಿ T20 ವಿಶ್ವಕಪ್ ತಂಡಕ್ಕೆ ಪಟ್ಟಿಯಲ್ಲಿ ಸ್ಟ್ಯಾಂಡ್ಬೈ ಆಗಿ ಹೆಸರಿಸಲ್ಪಟ್ಟಿದ್ದರು. ಆದರೆ ಜಸ್ಪ್ರೀತ್ ಬುಮ್ರಾ ಅವರ ಗಾಯದ ಸಮಸ್ಯೆಯಿಂದಾಗಿ ಅವರನ್ನು ಮೆಗಾ ಈವೆಂಟ್ನಿಂದ ಹೊರಗಿಡಬೇಕಾಯಿತು. ಇದೀಗ ಅವರ ಸ್ಥಾನಕ್ಕೆ ಅನುಭವಿ ವೇಗಿ ಮೊಹಮ್ಮದ್ ಶಮಿ ಬರಲು ಕಾರಣವಾಗಿದೆ. ಇದರೊಂದಿಗೆ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಸ್ಯ್ಟಾಂಡ್ ಬೈ ಆಗಿ ಹೆಸರಿಸಲಾಗಿದೆ. ಅವರು ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ. ಬುಮ್ರಾ ಅವರಿಂದ ತೆರವಾದ ಸ್ಥಾನಕ್ಕೆ ದೀಪಕ್ ಚಾಹರ್ ಕೂಡ ರೇಸ್ನಲ್ಲಿದ್ದರು. ಆದರೆ ಗಾಯದ ಸಮಸ್ಯೆಯಿಂದ ಅವರನ್ನೂ ಸಹ ಈಗ ಟೀಂನಿಂದ ಹೊರಗಿಡಲಾಗಿದೆ.
ಭಾರತ ತನ್ನ T20 ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸುತ್ತದೆ.
ಯುಎಇಯಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ ಕೊನೆಯ ಬಾರಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಅವರು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಆರು T20I ಗಳಲ್ಲಿ ಆಡಬೇಕಿತ್ತು ಆದರೆ CIVID-19 ತಗುಲಿ ಪ್ರತ್ಯೇಕವಾಗಿ ಉಳಿಯಬೇಕಾಯಿತು. ಶಮಿ 17 ಟಿ20 ಪಂದ್ಯಗಳನ್ನು ಆಡಿದ್ದು, 18 ವಿಕೆಟ್ ಪಡೆದಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ಗೆ ಪರಿಷ್ಕೃತ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.