ಅಂತರರಾಷ್ಟ್ರೀಯ

ಉಕ್ರೇನ್ ನಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳು: ಭಾರತೀಯ ವಿದ್ಯಾರ್ಥಿಗಳು ಆ ದೇಶಕ್ಕೆ ಹೋಗುವುದು ಏಕೆ?

ಉಕ್ರೇನ್ ನಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳು: ಭಾರತೀಯ ವಿದ್ಯಾರ್ಥಿಗಳು ಆ ದೇಶಕ್ಕೆ ಹೋಗುವುದು ಏಕೆ?

ಹೊಸದಿಲ್ಲಿ: ಜನವರಿ 31   ರಷ್ಯಾ ಮತ್ತು ಉಕ್ರೇನ್ ನಡುವೆ ಮತ್ತೊಮ್ಮೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಉದ್ವಿಗ್ನತೆಯಲ್ಲಿ 18 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ. ಭಾರತ ಸರ್ಕಾರವು ಪರಿಸ್ಥಿತಿಯ ಮೇಲೆ ನಿರಂತರವಾಗಿ ನಿಗಾ ಇರಿಸಿದೆ. ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಇಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಉಕ್ರೇನ್‌ನಲ್ಲಿ ಅಸ್ಥಿರತೆಯ ಹೊರತಾಗಿಯೂ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ಅಲ್ಲಿಗೆ ಏಕೆ ಹೋಗುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ?

ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಯಾವ ಕಾರಣಕ್ಕಾಗಿ ಉಕ್ರೇನ್‌ನಂತಹ ದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.? ಅಲ್ಲಿ ವ್ಯಾಸಂಗ ಮಾಡುವುದು ಸುಲಭನಾ ಅಥವಾ ಶುಲ್ಕ ಕಡಿಮೆ ಅನ್ನೋ ಕಾರಣಕ್ಕಾ? ಎಂಬಿತ್ಯಾದಿ ನಿಮ್ಮ ಪ್ರಶ್ನೆಗಳಿಗೆ ಯು.ಎನ್.ಐ. ಕನ್ನಡ ಸಮಂಜಸವಾದ ಉತ್ತರ ನೀಡಲಿದೆ.

ಭಾರತೀಯ ವಿದ್ಯಾರ್ಥಿಗಳಿಗೆ ಡಾಕ್ಟರ್ ಆಗುವ ಕನಸು!

ಇಂದಿಗೂ ಭಾರತದಂತಹ ದೇಶದಲ್ಲಿ ಎಂಬಿಬಿಎಸ್ ಪದವಿ ಪಡೆದರೆ ಉತ್ತಮ ಉದ್ಯೋಗ ಹಾಗೂ ಸಂಬಳ ಸಿಗುತ್ತದೆ ಅನ್ನೋ ವಿಶ್ವಾಸ ಇದೆ. ಆದರೆ, ಭಾರತದಲ್ಲಿ ಆಕಾಂಕ್ಷಿಗಳಿಗೆ ಬೇಕಾದಷ್ಟು ಸೀಟುಗಳು ಲಭ್ಯತೆ ಇಲ್ಲ. ಕೇವಲ 88 ಸಾವಿರ ಎಂಬಿಬಿಎಸ್ ಸೀಟುಗಳು ಇವೆ. 2021ರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅಂದರೆ, ಪ್ರತಿ ವರ್ಷ 7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ವೈದ್ಯರಾಗುವ ಕನಸು ಅಪೂರ್ಣವಾಗಿ ಉಳಿಯುತ್ತದೆ. ವೈದ್ಯನಾಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರತಿ ವರ್ಷ ಸಾವಿರಾರು ಭಾರತೀಯ ಯುವಕರು ಉಕ್ರೇನ್ ಮತ್ತು ಇತರ ದೇಶಗಳಿಗೆ ತೆರಳಲು ಇದೇ ಪ್ರಮುಖ ಕಾರಣವಾಗಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚವೂ ದುಬಾರಿಯಾಗಿರುವುದು ಇದಕ್ಕೆ ಮತ್ತೊಂದು ಕಾರಣ. ದೇಶದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ ಬರುತ್ತದೆ. ಆದರೆ ಉಕ್ರೇನ್‌ನಂತಹ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಕೇವಲ 25 ಲಕ್ಷ ರೂಪಾಯಿಗಳಲ್ಲಿ ಕಲಿಯಬಹುದಾಗಿದೆ. ಕಡಿಮೆ ವೆಚ್ಚದ ಕಾರಣ ಅನೇಕ ವಿದ್ಯಾರ್ಥಿಗಳು ವೈದ್ಯರಾಗಲು ಉಕ್ರೇನ್ ಮತ್ತು ಇತರ ದೇಶಗಳಿಗೆ ತೆರಳುತ್ತಾರೆ. ಅಂದರೆ, ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಮತ್ತು ಇತರ ದೇಶಗಳಿಗೆ ಹೋಗಲು ಪ್ರಮುಖ ಕಾರಣವೆಂದರೆ ಅಲ್ಲಿನ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಂತಹ ಕ್ಷೇತ್ರಗಳ ಅಗ್ಗದ ಶಿಕ್ಷಣ.

ಉಕ್ರೇನ್‌ನಂತಹ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚವು ಭಾರತಕ್ಕಿಂತ ಅನೇಕ ಪಟ್ಟು ಕಡಿಮೆ. ಭಾರತದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುವ ವೆಚ್ಚ 1 ಕೋಟಿಗಿಂತಲೂ ಹೆಚ್ಚು. ಅಮೆರಿಕದಲ್ಲಿ ಏಳರಿಂದ ಎಂಟು ಕೋಟಿ ರೂಪಾಯಿ ಮತ್ತು ಆಸ್ಟ್ರೇಲಿಯಾದಲ್ಲಿ 4 ಕೋಟಿ ರೂಪಾಯಿ ಆಗಿದೆ. ರಷ್ಯಾ, ಉಕ್ರೇನ್, ನೇಪಾಳ, ಚೀನಾ, ಫಿಲಿಪೈನ್ಸ್ ಅಥವಾ ಬಾಂಗ್ಲಾದೇಶದಲ್ಲಿ ಅಧ್ಯಯನ ಮಾಡಿದರೆ ಭಾರತದಲ್ಲಿ ಖರ್ಚು ಮಾಡುವುದಕ್ಕಿಂತ ಕಾಲು ಭಾಗದಲ್ಲಿ ವ್ಯಾಸಂಗ ಮಾಡಬಹುದಾಗಿದೆ.

ಉಕ್ರೇನ್‌ ಪದವಿಗಳು ಭಾರತದಲ್ಲಿ ಮಾನ್ಯವಾಗಿದೆಯೇ?

ಉಕ್ರೇನ್‌ನಂತಹ ದೇಶಗಳಿಂದ ವೈದ್ಯಕೀಯ ಶಿಕ್ಷಣ ಪಡೆದು ಹಿಂದಿರುಗಿದವರಿಗೆ ಭಾರತದಲ್ಲಿ ತಕ್ಷಣ ಪ್ರ್ಯಾಕ್ಟಿಸ್ ಮಾಡುವುದು ತುಂಬಾನೇ ಕಷ್ಟ. ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಭಾರತಕ್ಕೆ ಮರಳುವ ವೈದ್ಯಕೀಯ ವಿದ್ಯಾರ್ಥಿಗಳು ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಗೆ (FMGE) ಹಾಜರಾಗಬೇಕು. ಇದು ತುಂಬಾ ಕಠಿಣ ಪರೀಕ್ಷೆ ಮತ್ತು ಅದರಲ್ಲಿ ಉತ್ತೀರ್ಣ ಆಗುವುದು ಸುಲಭವಲ್ಲ.

ಇದಕ್ಕಾಗಿ ಅನೇಕ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಾರೆ, ಏಕೆಂದರೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಅವರು ಭಾರತದಲ್ಲಿ ವೈದ್ಯಕೀಯ ಅಭ್ಯಾಸವನ್ನು ಮಾಡಲು ಸಾಧ್ಯವಿಲ್ಲ. ಅವರಿಗೆ ಪರವಾನಗಿ ಕೂಡ ದೊರೆಯುವುದಿಲ್ಲ. ಅಂಕಿಅಂಶಗಳ ಪ್ರಕಾರ ವಿದೇಶದಿಂದ ಬರುವ 15% ವಿದ್ಯಾರ್ಥಿಗಳು FMGE ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಇನ್ನುಳಿದ ಅಂದರೆ 75% ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಸುದ್ದಿ ಓದಿ