ಖಾನಾಪುರ

ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ನಿರ್ಧಾರ

ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ನಿರ್ಧಾರ

ಲೋಕದರ್ಶನ ವರದಿ 

ಖಾನಾಪುರ 15: ತಾಲೂಕಿನ ಇಟಗಿ ಗ್ರಾಮದಲ್ಲಿ ಸಧ್ಯ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾದರಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದರಿಂದಾಗಿ ಇಟಗಿ ಸೇರಿದಂತೆ ಬೋಗೂರು, ಗಂದಿಗವಾಡ, ತೋಲಗಿ, ಹಿರೇಮುನವಳ್ಳಿ, ಚಿಕ್ಕಮುನವಳ್ಳಿ, ಕರವಿನಕೊಪ್ಪ, ಬೇಡರಹಟ್ಟಿ, ಕಡತನ ಬಾಗೇವಾಡಿ ಹಾಗೂ ಸುತ್ತಲಿನ ಭಾಗದ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ಅರವಿಂದ ಪಾಟೀಲ ಮಾಹಿತಿ ನೀಡಿದರು.  

ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು, ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಕಾರ್ಯ ಒತ್ತಡವಿತ್ತು. ಇದನ್ನು ಕಳೆದ ಕೆಲ ತಿಂಗಳುಗಳ ಹಿಂದೆ ತಾವು ಬಿಜೆಪಿ ಮುಖಂಡರಾದ ಸುಂದರ ಕುಲಕರ್ಣಿ, ಮಲ್ಲಪ್ಪ ಮಾರಿಹಾಳ, ಮಹಾರುದ್ರಯ್ಯ ಹಿರೇಮಠ, ಸುದೀಪಗೌಡ್ರು ಪಾಟೀಲ ಸೇರಿದಂತೆ ಇಟಗಿ ಹಾಗೂ ಸುತ್ತಲಿನ ಭಾಗದ ಹಿರಿಯರ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಆರೋಗ್ಯ ಸಚಿವ ಡಾ. ಸುಧಾಕರ ಅವರ ಗಮನಕ್ಕೆ ತಂದಿದ್ದರ ಫಲವಾಗಿ ಅವರು ಇಟಗಿ ಆಸ್ಪತ್ರೆಯ ಉನ್ನತೀಕರಣವನ್ನು ನ. 17ರ ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯಿಸಿ ಅಧೀಕೃತ ಆದೇಶವನ್ನು ಹೊರಡಿಸಿದ್ದಾರೆ ಎಂದು ವಿವರಿಸಿದರು. 

ಇಟಗಿ ಆಸ್ಪತ್ರೆ ಉನ್ನತೀಕರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 12.40 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಹಣಕಾಸು ವಿಭಾಗದ ಅನುಮೋದನೆಯ ಬಳಿಕ ಆಸ್ಪತ್ರೆ ಕಟ್ಟಡದ ಕಾಮಗಾರಿ ಆರಂಭವಾಗಲಿದೆ. ಈ ಆಸ್ಪತ್ರೆಯ ಉನ್ನತೀಕರಣದ ಬಳಿಕ ಆಸ್ಪತ್ರೆಗೆ ಹೊಸದಾಗಿ ತಜ್ಞವೈದ್ಯರನ್ನು, ವಿಶೇಷ ಉಪಕರಣಗಳನ್ನು, ಅಂಬುಲನ್ಸ್‌ ಮತ್ತು ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಜೊತೆಗೆ ತಾಲೂಕಿನ ಚಾಪಗಾಂವ, ಗುಂಜಿ, ಜಾಂಬೋಟಿ, ಗರ್ಲಗುಂಜಿ ಗ್ರಾಮಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸುವಂತೆ ಸಚಿವರಿಗೆ ನೀಡಲಾದ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು. 


ಸುದ್ದಿ ಓದಿ