ಸತ್ಯ ನ್ಯಾಯ, ಪ್ರಾಮಾಣಿಕತೆ ಗುಣಗಳ ಪ್ರತೀಕವೇ ಶ್ರೀರಾಮ
ರತ್ನಾ ಮಾಮನಿ ಹೇಳಿಕೆ: ಶ್ರೀವಾಲ್ಮೀಕಿ ರಾಮಾಯಣ ಆಧಾರಿತ ಶ್ರೀರಾಮೋತ್ಸವ ಕಾರ್ಯಕ್ರಮ
ಸವದತ್ತಿ 3: ಸತ್ಯ ನ್ಯಾಯಬದ್ಧತೆಯೊಂದಿಗೆ ದೈವನಿಷ್ಠೆ ಪ್ರಾಮಾಣಿಕತೆ ಗುಣಗಳ ಪ್ರತೀಕವೇ ಶ್ರೀರಾಮ ದೇವರಾಗಿದ್ದು, ನಾವು ನಮ್ಮ ದೈನಂದಿನ ಜೀವನದಲ್ಲಿ ರಾಮನ ಆದರ್ಶಗಳನ್ನು ಅಳವಡಿಸಿಕೊಂಡು ಬದುಕುವ ಸತ್ಪರಂಪರೆಯನ್ನು ರೂಢಿಸಿಕೊಳ್ಳಬೇಕೆಂದು ರತ್ನಾ ಆನಂದ ಮಾಮನಿ ಹೇಳಿದರು.
ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ರೇಣುಕಾ(ವ)ಸಂಸ್ಕೃತ ಪಾಠಶಾಲೆ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ವಿಭಾಗಮಟ್ಟದ ಶ್ರೀಮದ್ ವಾಲ್ಮೀಕಿ ರಾಮಾಯಣ ಆಧಾರಿತ ಶ್ರೀರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಮಾಯಣ ಜೀವನದ ಮೌಲ್ಯಗಳನ್ನು ಒಳಗೊಂಡಿದ್ದು, ದೂರದರ್ಶನದಲ್ಲಿ ರಾಮಾಯಣ ಪ್ರಸಾರವಾಗುತ್ತಿದ್ದರೆ ಅಂದು ಟಿವಿ ನೋಡಲು ಅಕ್ಕಪಕ್ಕದವರೊಂದಿಗೆ ಇಡಿ ಕುಟುಂಬವೇ ವೀಕ್ಷಣೆ ಮಾಡುವ ಕಾಲವಾಗಿತ್ತು ಎಂದರು. ರಾಮನ ಆದರ್ಶದೊಂದಿಗೆ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ನಡೆಯಬೇಕೆಂದರು.
ಸಂಸ್ಕೃತಿ ಶಿಕ್ಷಣ ನಿರ್ದೇಶನಾಲಯದ ಬೆಂಗಳೂರು ನಿರ್ದೇಶಕ ಪಿ.ಆರ್.ಪಾಗೋಜಿ ಮಾತನಾಡಿ, ಸೌಜನ್ಯದ ಸಾಕಾರ ಮೂರ್ತಿ ರಾಮನಾಗಿದ್ದು, ಬದುಕಿನ ಪ್ರತಿ ಹಂತದಲ್ಲಿಯೂ ರಾಮನ ಆದರ್ಶ ಪಾಲಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದರು.
ಬಿ.ಎನ್.ಹೊಸೂರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಕೃತ ವಿಶ್ವವಿದ್ಯಾಲಯ ಸಂಸ್ಕೃತ ಪಾಠ ಶಾಲೆಗಳ ಮೂಲಕ ರಾಮಾಯಣದ ಕುರಿತು ರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸುವಂತಾಗಿರುವುದು ನಿಜಕ್ಕೂ ಮಹತ್ವದ ಸಂಗತಿ. ಈ ಮೂಲಕ ರಾಮನ ಅದರ್ಶದ ಬದುಕನ್ನು ಮಕ್ಕಳಿಗೆ ತಿಳಿಸಲು ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.
ಸಹಾಯಕ ಪ್ರಾಧ್ಯಾಪಕ ಭಾಸ್ಕರ ಜೋಶಿ ಮಾತನಾಡಿ, ಭೌತಿಕ ರಾಮಮಂದಿರ ಅಯೋಧ್ಯೆಯಲ್ಲಿದ್ದರೂ ಸಹಿತ ರಾಮನ ಆದರ್ಶಗಳು ಪ್ರತಿಯೊಬ್ಬರ ಹೃದಯದಲ್ಲಿರಬೇಕಾಗಿದ್ದು, ಅಂದಾಗ ಮಾತ್ರ ರಾಮನ ಸ್ಮರಣೆ ಸಾರ್ಥಕ ಎಂದರು.
ರಾಮಚಂದ್ರ ಏಡಕೆ.ಪಿ.ಆರ್.ಪಾಗೋಜಿ, ಭಾಸ್ಕರ ಜೋಶಿ, ರತ್ನಾ ಆನಂದ ಮಾಮನಿ, ಡಾ.ನಯನಾ ಭಸ್ಮೆ, ಸುರೇಶ ಬೆಳವಡಿ, ವೈ.ಬಿ.ಕಡಕೋಳ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ವಾನ್ ನಾಗಲಿಂಗ ಮಾಳೇದವರ ಕೃತಿ ವಿದ್ಯಾರ್ಥಿ ಮಿತ್ರ ಬಿಡುಗಡೆಗೊಳಿಸಲಾಯಿತು. ಶಿವಯೋಗೀಶ್ವರ ಸಂಸ್ಕೃತ ಪಾಠಶಾಲೆ ಇಂಚಲದ ವಿದ್ಯಾರ್ಥಿಗಳಿಂದ ಆತ್ಮಾರಾಮ ಆನಂದ ರಮಣ ಭಜನೆ ಜರುಗಿತು.
ಡಾ.ನಯನಾ ಭಸ್ಮೆ, ಪತ್ರಿಕೆಯ ಸಂಪಾದಕ ರಾಮಚಂದ್ರ ಏಡಕೆ, ಬಿ.ಎಸ್.ಗಡಾದ, ಜೆ.ಬಿ.ಕರೆಪ್ಪನವರ, ರವಿ.ಬ್ಯಾಹಟ್ಟಿ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷ ಸುರೇಶ ಬೆಳವಡಿ, ಶ್ರೀ ರೇಣುಕಾ(ಎ)ಸಂಸ್ಕೃತ ಪಾಠಶಾಲೆ ಸವದತ್ತಿಯ ಮುಖ್ಯೋಪಾಧ್ಯಾಯ ಬಿ.ಎನ್.ಹೊಸೂರ ಹಾಗೂ ಶ್ರೀರಾಮನ ವೇಷಧಾರಿ ಬಾಲಪ್ರತಿಭೆ ಸುಪರ್ಣಾ ಜೋಶಿ ಉಪಸ್ಥಿತರಿದ್ದರು.
ಜೆ.ಬಿ.ಕರೆಪ್ಪನವರ ಸ್ವಾಗತಿಸಿದರು. ಮಲ್ಲೇಶ ಮಲಮೇತ್ರಿ ನಿರೂಪಿಸಿದರು. ಬಿ.ಎಸ್.ಗಡಾದ ವಂದಿಸಿದರು.