ಅಂತರರಾಷ್ಟ್ರೀಯ

ಚುನಾವಣಾ ದಿನದಂದು ಫಿಲಿಪೈನ್ಸ್‌ನಲ್ಲಿ ಗುಂಡಿನ ದಾಳಿ: ಮೂವರು ಸಾವು

ಚುನಾವಣಾ ದಿನದಂದು ಫಿಲಿಪೈನ್ಸ್‌ನಲ್ಲಿ ಗುಂಡಿನ ದಾಳಿ: ಮೂವರು ಸಾವು

ಮನಿಲಾ: ಮೇ 09: ಫಿಲಿಪ್ಪೀನ್ಸ್‌ನ ದಕ್ಷಿಣ ಪ್ರಾಂತ್ಯದ ಮಗಿಂದನಾವೊದಲ್ಲಿ ಮತಗಟ್ಟೆಯೊಂದರ ಬಳಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬ ಗಾಯಗೊಂಡಿದ್ದಾರೆ.

ಎರಡು ವ್ಯಾನ್‌ಗಳಲ್ಲಿ ಬಂದ ದಾಳಿಕೋರರು ಬೆಳಿಗ್ಗೆ 07:25 ಗಂಟೆಗೆ (ಸ್ಥಳೀಯ ಕಾಲಮಾನ) ಬುಲುವಾನ್ ನಗರದಲ್ಲಿ ಮತದಾನ ಪ್ರಕ್ರಿಯೆಗೆ ಸಹಾಯ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾರೆ. ಸಾವಿಗೀಡಾದ ವ್ಯಕ್ತಿಗಳು ನಗರದಲ್ಲಿ ಮೇಯರ್ ಹುದ್ದೆಗೆ ಸ್ಪರ್ಧಿಸುತ್ತಿರುವ ಸ್ಥಳೀಯ ರಾಜಕಾರಣಿಯ ಬೆಂಬಲಿಗರಾಗಿದ್ದರು ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಫಿಲಿಪೈನ್ಸ್‌ನ ಬೆಸಿಲಾನ್ ಪ್ರಾಂತ್ಯದ ಸುಮಿಸಿಪ್ ನಗರದಲ್ಲಿ ಸೋಮವಾರ ಬೆಳಿಗ್ಗೆ ಮತ್ತೊಂದು ಗುಂಡಿನ ದಾಳಿ ನಡೆದಿರುವ ಬಗ್ಗೆ ಚುನಾವಣಾ ಆಯೋಗ ವರದಿ ಮಾಡಿದೆ. ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಆಯೋಗ ತಿಳಿಸಿದೆ.

ಮತದಾನದ ಮುನ್ನಾದಿನದಂದು ಭಾನುವಾರ ರಾತ್ರಿ ಮಗಿಂದನಾವೊ ಪ್ರಾಂತ್ಯದಲ್ಲಿ ಗ್ರೆನೇಡ್ ಸ್ಫೋಟದಲ್ಲಿ ಕನಿಷ್ಠ ಎಂಟು ಜನರು ಗಾಯಗೊಂಡಿದ್ದರು. ದಾತು ಅನ್‌ಸೇ ಹಾಗೂ ಶರೀಫ್ ಆಗುವಾಕ್ ಬಳಿ ಈ ಗ್ರೆನೇಡ್ ಸ್ಫೋಟಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ‘ಹಾಟ್ ಸ್ಪಾಟ್’ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಪೊಲೀಸರು ದಾಳಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಹಿಂಸಾಚಾರದಿಂದ ಮತದಾನ ಪ್ರಕ್ರಿಯೆಗೆ ಅಡ್ಡಿ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಅಧ್ಯಕ್ಷರು, ಹೊಸ ಉಪಾಧ್ಯಕ್ಷರು, 12 ಸೆನೆಟರ್‌ಗಳು, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ 300 ಕ್ಕೂ ಹೆಚ್ಚು ಸದಸ್ಯರು ಮತ್ತು 17,000 ಕ್ಕೂ ಹೆಚ್ಚು ಸ್ಥಳೀಯ ಅಧಿಕಾರಿಗಳನ್ನು ಆಯ್ಕೆ ಮಾಡಲು ದೇಶದ 6.57 ಕೋಟಿಗಿಂತಲೂ ಹೆಚ್ಚು ಜನರು ಸೋಮವಾರ ಮತ ಚಲಾಯಿಸಲಿದ್ದಾರೆ.

ಸುದ್ದಿ ಓದಿ