ಶಿವರಾಮ ಕಾಸರಗೋಡುರಿಗೆ ಪ್ರತಿಷ್ಠಿತ "ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿ"
ಬೆಂಗಳೂರು 03: ಕರ್ನಾಟಕ ರಾಜಧಾನಿಯ ಹಿರಿಯ ಸಂಘಟನೆಯಾದ ವಿ. ಕೆ. ಎಂ. ಕಲಾವಿದರು(ರಿ.), ಬೆಂಗಳೂರು ಇದರ ನೇತೃತ್ವದಲ್ಲಿ ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದಲ್ಲಿ ನಡೆಯುವ ಡಾ. ಬಿ. ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಸ್ಮಾರಕ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾಮೇಳ - ರಂಗೋತ್ಸವ ಮತ್ತು ನಿರಂತರ 45ನೇ ವರ್ಷದ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2026 ಜೂನ್ 8 ರಿಂದ 10 ರ ತನಕ ನಡೆಯಲಿದೆ.
ಇದರ ಸಮಾರೋಪ ಸಮಾರಂಭವು ಜೂನ್ 10 ಬುಧವಾರದಂದು ಸಂಜೆ ಗಂಟೆ 5.00 ಕ್ಕೆ ನಡೆಯಲಿದ್ದು ಗಡಿನಾಡು ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕಾಗಿ, ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರಿಗೆ ಕರ್ನಾಟಕ ಗಡಿನಾಡು ಸಂಘಟನಾಗಾರರಾಗಿ 35 ವರ್ಷದ ಸೇವೆಗಾಗಿ ಪ್ರತಿಷ್ಟಿತ ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ,ಶ್ರೀಮತಿ ಮಧುರ ಅಶೋಕ ಕುಮಾರ್ ಬೆಂಗಳೂರು, ಖ್ಯಾತ ಚಲನಚಿತ್ರ ನಟ ನಾಟಕಕಾರ ಮುಖ್ಯಮಂತ್ರಿ ಚಂದ್ರು ಭಾಗವಹಿಸಲಿದ್ದಾರೆ. ವಿ.ಕೆ.ಎಂ ಕಲಾವಿದರು(ರಿ.), ಬೆಂಗಳೂರು ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಿ.ಎಂ. ತಿಮ್ಮಯ್ಯ ಉಪಸ್ಥಿತರಿರುತ್ತಾರೆ