ಯರಗಟ್ಟಿ

ಯರಗಟ್ಟಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ಯರಗಟ್ಟಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ಲೋಕದರ್ಶನ ವರದಿ 

ಯರಗಟ್ಟಿ 25: ಪಟ್ಟಣದ ಕರ್ನಾಟಕ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಚುನಾವಣೆ ಯಶಸ್ವಿಯಾಗಿ ನಡೆಯಿತು.  ಸಂಸ್ಥೆಯ ಅಧ್ಯಕ್ಷ ರುದ್ರ​‍್ಪ ಹಟ್ಟಿ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರನ್ನು ಮತದಾನದ ಮೂಲಕ ಆಯ್ಕೆ ಮಾಡುವ ವ್ಯವಸ್ಥೆ ಮಕ್ಕಳಿಗೆ ಪ್ರಜಾಪ್ರಭುತ್ವ ಹಾಗೂ ಚುನಾವಣಾ ಪ್ರಕ್ರಿಯೆಯ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆಯ ಈ ಕ್ರಮ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಪರಿಣಾಮಕಾರಿಯಾಗಿದೆ ಎಂದರು.  ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸುವ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಿಂದ ದೇಶದ ರಾಜಕೀಯ ವ್ಯವಸ್ಥೆ, ಮತದಾನದ ಮಹತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಪ್ರಾಯೋಗಿಕ ಅನುಭವ ದೊರೆಯುತ್ತದೆ ಎಂದು ತಿಳಿಸಿದರು.  

ಪ್ರಧಾನ ಗುರು ವಿ.ಎಂ. ಹಾದಿಮನಿ ಮಾತನಾಡಿ, ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ, ಶಿಕ್ಷಣ ಸಚಿವ, ಸ್ವಚ್ಛತಾ ಸಚಿವ, ಗ್ರಂಥಾಲಯ, ರಕ್ಷಣಾ, ಆಹಾರ ಸೇರಿದಂತೆ ವಿವಿಧ ಖಾತೆಗಳ ಜವಾಬ್ದಾರಿಗಳನ್ನು ವಹಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಸಂಘಟನೆ ಹಾಗೂ ಜವಾಬ್ದಾರಿಯ ಗುಣಗಳು ಬೆಳೆಯುವುದರ ಜೊತೆಗೆ ಶಾಲೆಯ ನಿರ್ವಹಣೆಯಲ್ಲೂ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಹೆಚ್ಚುತ್ತದೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಅಶೋಕ ಹೊಂಗಳ, ಸಮೂಹ ಸಂಪನ್ಮೂಲ ವ್ಯಕ್ತಿ ವಸಂತ ಬಡಿಗೇರ, ಪಾಲಕರ ಪ್ರತಿನಿಧಿಗಳಾದ ಶಾವಲಿ ಕನರ್ಜಿ, ದುಂಡಯ್ಯ ಹಿರೇಮಠ, ಮಲ್ಲಿಕಾರ್ಜುನ ಶಿವಣ್ಣವರ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು. 


ಸುದ್ದಿ ಓದಿ