ಅಫ್ಗಾನಿಸ್ತಾನದ ಹೊರಗಿನ ವಾಯು, ಭೂ ಮಾರ್ಗಗಳ ಸುರಕ್ಷತೆ ಪರಿಶೀಲನೆ; ಅಮೆರಿಕ
ವಾಷಿಂಗ್ಟನ್, ಸೆ 2 : ಅಫ್ಗಾನಿಸ್ತಾನದಲ್ಲಿ ಉಳಿದಿರುವ ಅಮೆರಿಕ ಪ್ರಜೆಗಳನ್ನು ಸ್ಥಳಾಂತರಿಸುವ ಮುನ್ನ ವಾಯು ಮತ್ತು ಭೂ ಮಾರ್ಗಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಅಲ್ಲಿನ ರಾಜಕೀಯ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ವಿಕ್ಟೋರಿಯಾ ನುಲಾಂಡ್ ಬುಧವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ""ನಾವು ಮಾಡಬೇಕಾದ ಮೊದಲ ಕೆಲಸವೆಂದರೆ ಅಲ್ಲಿ ಉಳಿದ ಅಮೆರಿಕನ್ನರನ್ನು ಸ್ಥಳಾಂತರಿಸುವ ಮೊದಲು ಅಲ್ಲಿನ ವಾಯು ಮಾರ್ಗಗಳು ಮತ್ತು ಭೂ ಮಾರ್ಗಗಳನ್ನು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದರು.
ಆಗಸ್ಟ್ 31 ರಂದು ಅಫ್ಗಾನಿಸ್ತಾನದಿಂದ ಅಮೆರಿಕೆ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯಲಾಯಿತು. ಆದರೆ, ಅಲ್ಲಿ ಈಗಲೂ ಸುಮಾರು 200 ಅಮೆರಿಕ ಪ್ರಜೆಗಳು ಉಳಿದಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಮತ್ತು ಶ್ವೇತಭವನ ದೃಢಪಡಿಸಿದೆ.
ಮಂಗಳವಾರ ಈ ಕುರಿತು ಹೇಳಿಕೆ ನೀಡಿದ್ದ ಅಧ್ಯಕ್ಷ ಜೋ ಬೈಡೆನ್, ಅಫ್ಗಾನಿಸ್ತಾನವನ್ನು ತೊರೆಯಲು ನಿರ್ಧರಿಸಿದ ಯಾವುದೇ ಅಮೆರಿಕ ನಾಗರಿಕರನ್ನು ಸ್ಥಳಾಂತರಿಸಲು ಸರ್ಕಾರ ಬದ್ಧವಾಗಿದೆ ಎಂದಿದ್ದರು.
ಕಾಬೂಲ್ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದಾಗ ದೇಶದಲ್ಲಿ ವಿಶೇಷ ವಲಸಿಗ ವೀಸಾ (ಎಸ್‌ಐವಿ) ಗಾಗಿ ಅರ್ಜಿ ಸಲ್ಲಿಸಿದ ಸುಮಾರು 20,000 ಅಫ್ಗಾನಿಗಳು ಉಳಿದಿದ್ದರು ಎಂದು ಅಮೆರಿಕ ಮಾಧ್ಯಮ ವರದಿ ಮಾಡಿದೆ.