ಉಕ್ರೇನ್ ಬಳಿಕ ಫಿನ್ಲ್ಯಾಂಡ್ ಹಾಗೂ ಸ್ವೀಡನ್‌ಗೆ ರಷ್ಯಾ ಧಮ್ಕಿ
ಮಾಸ್ಕೋ: ಫೆಬ್ರವರಿ 26: ಉಕ್ರೇನ್ ಬಳಿಕ ರಷ್ಯಾ ಈಗ ಫಿನ್ಲ್ಯಾಂಡ್ ಮತ್ತು ಸ್ವೀಡನ್ ಗೆ ಬೆದರಿಕೆ ಹಾಕಿದೆ. ಈ ಎರಡೂ ರಾಷ್ಟ್ರಗಳು ನ್ಯಾಟೋಗೆ ಸೇರ್ಪಡೆಯಾಗುವ ಸಂಬಂಧ ರಷ್ಯಾ ಈ ಧಮ್ಕಿ ನೀಡಿದೆ. ಈ ಬೆಳವಣಿಗೆಗಳ ಬಳಿಕ, ಯುಎಸ್ ಅಧ್ಯಕ್ಷ ಜೋ ಬೈಡನ್, ನ್ಯಾಟೋದ ತೆರೆದ ಬಾಗಿಲು ನೀತಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.
ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ, ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ತಮ್ಮ ಭದ್ರತೆಗೋಸ್ಕರ ಇತರ ರಾಷ್ಟ್ರಗಳ ಭದ್ರತೆಗೆ ಹಾನಿ ಉಂಟು ಮಾಡುವ ಆಧಾರದ ಮೇಲೆ ನೀತಿ ರೂಪಿಸಬಾರದು ಎಂದು ಹೇಳಿದ್ದಾರೆ. ಈ ದೇಶಗಳು ನ್ಯಾಟೋಗೆ ಸೇರಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿರುವ ಅವರು, ಇದರ ಹೊರತಾಗಿಯೂ ಸೇರುವ ಇಚ್ಛೆ ವ್ಯಕ್ತಪಡಿಸಿದರೆ ಮಿಲಿಟರಿ ಮತ್ತು ರಾಜಕೀಯ ಪರಿಣಾಮ ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ.
ರಷ್ಯಾ ಬೆದರಿಕೆ ಹಾಕಿದ್ದು ಏಕೆ?
ರಾಜಕೀಯ ಮತ್ತು ಮಿಲಿಟರಿ ವಿಧಾನಗಳ ಮೂಲಕ ನ್ಯಾಟೋ ತನ್ನ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತರಿಪಡಿಸುವ ಗುರಿ ಹೊಂದಿದೆ. ಫಿನ್‌ಲ್ಯಾಂಡ್‌ನ ಪ್ರಧಾನಿ ಸನಾ ಮರಿನ್ ದೇಶದ ಸಂಸತ್ತಿನಲ್ಲಿ ರಾಷ್ಟ್ರೀಯ ಭದ್ರತೆಯ ಸಮಸ್ಯೆ ಹೆಚ್ಚಾದರೆ ಫಿನ್‌ಲ್ಯಾಂಡ್ ನ್ಯಾಟೋ ಸದಸ್ಯತ್ವ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಫಿನ್ಲ್ಯಾಂಡ್ ಪ್ರಧಾನಿಯ ಈ ಹೇಳಿಕೆ ಬಳಿಕ ರಷ್ಯಾ ಈ ಬೆದರಿಕೆ ಒಡ್ಡಿದೆ.
ರಶಿಯಾ ಏಕೆ ಹೆದರುತ್ತದೆ?
ವಾಸ್ತವವಾಗಿ ಸೇಂಟ್ ಪೀಟರ್ಸ್ ಬರ್ಗ್ ರಷ್ಯಾದ ವ್ಯಾಪಾರ ರಾಜಧಾನಿ ಮತ್ತು ಬಿಲಿಯನೇರ್ ಗಳ ನಗರವಾಗಿದೆ. ಇದು ಫಿನ್ಲ್ಯಾಂಡ್ ಗಡಿಯ ಪಕ್ಕದಲ್ಲಿದೆ. ಫಿನ್‌ಲ್ಯಾಂಡ್ ನ್ಯಾಟೋದ ಸದಸ್ಯತ್ವ ಪಡೆದರೆ ರಷ್ಯಾದ ಉತ್ತರ ಮುಂಭಾಗಕ್ಕೆ ಸಮಸ್ಯೆ ಕಟ್ಟಿಟ್ಟಬುತ್ತಿ. ಇದರಿಂದ ಭವಿಷ್ಯದ ದೃಷ್ಟಿಯಿಂದ ರಷ್ಯಾದ ಉದ್ವಿಗ್ನತೆಗೆ ಕಾರಣವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಫಿನ್‌ಲ್ಯಾಂಡ್‌ಗೆ ಮಾತ್ರವಲ್ಲದೆ ಸ್ವೀಡನ್‌ನ ಮೇಲೂ ರಷ್ಯಾ ಮಿಲಿಟರಿ ಕಾರ್ಯಾಚರಣೆಯ ಬೆದರಿಕೆ ಹಾಕಿದೆ.
ಇದೇ ವೇಳೆ ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್, ರಷ್ಯಾ ಇದುವರೆಗೆ ನಮ್ಮ ದೇಶದ ಮೇಲೆ ಯಾವುದೇ ರೀತಿಯ ರಾಜಕೀಯ ಅಥವಾ ಮಿಲಿಟರಿ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಆದರೆ ಉಕ್ರೇನ್ ಮೇಲಿನ ದಾಳಿಯ ನಂತರ ಫಿನ್ಲ್ಯಾಂಡ್ ನಲ್ಲಿ ನ್ಯಾಟೋ ಸದಸ್ಯತ್ವದ ಚರ್ಚೆ ಆರಂಭವಾಗಿದೆ.
ಇನ್ನೊಂದೆಡೆ ಸ್ವೀಡನ್ ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ “ರಷ್ಯಾದ ಕ್ರಮಗಳು ಯುರೋಪಿಯನ್ ಭದ್ರತಾ ವ್ಯವಸ್ಥೆಯ ಮೇಲೆ ದಾಳಿಯಾಗಿದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಗೆ ರಷ್ಯಾ ಮಾತ್ರ ಕಾರಣವಾಗಿದೆ ಎಂದು ಹೇಳಿದ್ದಾರೆ. ನ್ಯಾಟೋ ಶೃಂಗಸಭೆಯಲ್ಲಿ ಫಿನ್‌ಲ್ಯಾಂಡ್ ಮತ್ತು ಸ್ವೀಡನ್, ರಷ್ಯಾ ಸೇನೆ ಉಕ್ರೇನ್ ನಲ್ಲಿ ನುಗ್ಗಿರುವುದನ್ನು ಬಲವಾಗಿ ಖಂಡಿಸಿದ್ದವು.
ಈ ಮಧ್ಯೆ, ಯುಎಸ್ ಅಧ್ಯಕ್ಷ ಜೋ ಬೈಡೆನ್ ನ್ಯಾಟೋದ ತೆರೆದ ಬಾಗಿಲಿನ ನೀತಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ. ರಷ್ಯಾ ತನ್ನ ಗುರಿಯನ್ನು ಸಾಧಿಸಲು ವಿಫಲವಾಗಿದೆ. NATO ಎಂದಿನಂತೆ ಒಗ್ಗಟ್ಟಿನಿಂದ ಮತ್ತು ನಿರ್ಣಯದ ಮೂಲಕ ನಮ್ಮ ಮೌಲ್ಯಗಳನ್ನು ಹಂಚಿಕೊಳ್ಳಲಿದ್ದೇವೆ. ನಮ್ಮ ಮೈತ್ರಿಗೆ ಸೇರಲು ಬಯಸುವ ಯುರೋಪಿಯನ್ ರಾಷ್ಟ್ರಗಳಿಗೆ ಯಾವಾಗಲೂ ನ್ಯಾಟೋ ಬಾಗಿಲು ತೆರೆದಿರುತ್ತದೆ ಎಂದು ಬೈಡನ್ ಹೇಳಿದ್ದಾರೆ.