ಉಕ್ರೇನ್ ಅಪಾರ್ಟ್‌ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ – 15 ಸಾವು
ಕೈವ್: ಜುಲೈ 10 :ಪೂರ್ವ ಉಕ್ರೇನ್ ನಗರವಾದ ಚಾಸಿವ್ ಯಾರ್‌ನಲ್ಲಿರುವ ಅಪಾರ್ಟ್‌ಮೆಂಟ್ ಬ್ಲಾಕ್‌ನ ಮೇಲೆ ರಷ್ಯಾದ ಸೇನೆ ರಾಕೆಟ್ ಹಾರಿಸಿದೆ. ಇದರಿಂದ ಕನಿಷ್ಠ 15 ಜನರು ದುರ್ಮರಣಕ್ಕೀಡಾಗಿದ್ದಾರೆ.
ಭಾನುವಾರ ಮಾಧ್ಯಮಗಳಲ್ಲಿ ಈ ಮಾಹಿತಿ ನೀಡಲಾಗಿದ್ದು, ದಾಳಿಯ ನಂತರ 20 ಕ್ಕೂ ಹೆಚ್ಚು ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡರು ಎಂದು ಬಿಬಿಸಿ ವರದಿ ಮಾಡಿದೆ. ಕೇವಲ ಐವರನ್ನು ಮಾತ್ರ ಅವಶೇಷಗಳಿಂದ ಸುರಕ್ಷಿತವಾಗಿ ಹೊರತೆಗೆಯಲು ಸಾಧ್ಯವಾಗಿದೆ. ಸಾವು-ನೋವುಗಳ ಬಗ್ಗೆ ಉಕ್ರೇನಿಯನ್ ತುರ್ತು ಸೇವೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐದು ಅಂತಸ್ತಿನ ಕಟ್ಟಡದ ಒಂದು ಭಾಗಕ್ಕೆ ರಾಕೆಟ್ ಅಪ್ಪಳಿಸಿದ್ದು, ಚಾಸಿವ್ ಯಾರ್ ಕ್ರಾಮಟೋರ್ಸ್ಕ್ ನಗರದ ಸಮೀಪವಿರುವ ಡೊನೆಟ್ಸ್ಕ್ ಪ್ರದೇಶದಲ್ಲಿದೆ. ಪ್ರಾದೇಶಿಕ ಗವರ್ನರ್ ಪಾವ್ಲೋ ಕಿರಿಲೆಂಕೊ ರಷ್ಯಾದ ಉರಾಗಾನ್ ರಾಕೆಟ್‌ಗಳಿಂದ ಈ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.