ರಷ್ಯಾ-ಉಕ್ರೇನ್ ಯುದ್ಧ: ಶಾಂತಿ ಮಾತುಕತೆ ಮಧ್ಯೆ 180 ವಿದೇಶಿ ಯೋಧರ ಹತ್ಯೆ
ಮಾಸ್ಕೋ: ಮಾರ್ಚ್ 14 : ರಷ್ಯಾ-ಉಕ್ರೇನ್ ಯುದ್ಧ ನಡೆದು 19 ದಿನಗಳಾಗಿವೆ. ಆದರೆ, ಇಲ್ಲಿಯವರೆಗೆ ಸುರಕ್ಷಿತವಾಗಿ ಉಳಿದಿದ್ದ ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ ಈಗ ಬಾಂಬ್ ದಾಳಿ ತೀವ್ರಗೊಂಡಿದೆ. ನ್ಯಾಟೋ ಸದಸ್ಯ ಪೋಲೆಂಡ್‌ನ ಗಡಿಯಿಂದ ಕೇವಲ 12 ಮೈಲಿ ದೂರದಲ್ಲಿರುವ ಯವೊರಿವ್‌ನಲ್ಲಿನ ಮಿಲಿಟರಿ ತರಬೇತಿ ನೆಲೆಯ ಮೇಲೆ ರಷ್ಯಾದ ಪಡೆಗಳು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿವೆ. ಇದರಿಂದಾಗಿ 35 ನಾಗರಿಕರು ಸಾವಿಗೀಡಾದ್ರೆ, 130 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆದರೆ ಈ ದಾಳಿಯಲ್ಲಿ 180 ವಿದೇಶಿ ಯೋಧರನ್ನು ಕೊಂದಿರುವುದಾಗಿ ರಷ್ಯಾ ಹೇಳಿಕೊಂಡಿದೆ.
ಮತ್ತೊಂದೆಡೆ ದಕ್ಷಿಣ ಬಂದರು ನಗರವಾದ ಮೈಕೋಲೆವ್‌ನಲ್ಲಿ ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಒಂಬತ್ತು ನಾಗರಿಕರು ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಸ್ಪುಟ್ನಿಕ್ ಸುದ್ದಿ ಸಂಸ್ಥೆಯ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ಅಧಿಕಾರಿಗಳು ಇಂದು ಮತ್ತೆ ಶಾಂತಿ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ನೀಡಿದೆ. ಎರಡೂ ರಾಷ್ಟ್ರಗಳ ಮಧ್ಯೆದ ಈ ಸಂಭಾಷಣೆಯು ವೀಡಿಯೊ ಕರೆ ಮೂಲಕ ನಡೆಯಲಿದೆ.