ರಸ್ತೆ ಕಾಮಗಾರಿ ಅಪೂರ್ಣ; ವೆಂಕಟೇಶ್ವರ ರಥೋತ್ಸವಕ್ಕೆ ಅಡ್ಡಿ
ಲೋಕದರ್ಶನ ವರದಿ
ಯಮಕನಮರಡಿ 16: ಸ್ಥಳೀಯ ಐದು ದೇವರ ಮಂದಿರಗಳ ವೆಂಕಟೇಶ್ವರ ರಥೋತ್ಸವವು ಪ್ರತಿವರ್ಷ ಸಂಪ್ರದಾಯಬದ್ಧವಾಗಿ ನಡೆಯುತ್ತ ಬಂದಿದೆ. ಆದರೆ, ಕಳೆದ ಎರಡು ವರ್ಷಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ರಥೋತ್ಸವಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ವರ್ಷವೂ ಕಾಮಗಾರಿ ಅಪೂರ್ಣವಾಗಿರುವುದರಿಂದ ರಥೋತ್ಸವಕ್ಕೆ ಮತ್ತಷ್ಟು ಅಡಚಣೆ ಉಂಟಾಗಿದೆ.
ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಪರ್ಯಾಯ ಮಾರ್ಗದಲ್ಲಿ ರಥೋತ್ಸವ ನಡೆಸಬೇಕೆಂದರೂ ಮುಂದಿನ ಭಾಗದಲ್ಲಿ ರಸ್ತೆ ಅಗೆದು ಬಿಡಲಾಗಿದೆ. ಇದರಿಂದ ರಥೋತ್ಸವದ ಮೆರವಣಿಗೆ ನಡೆಸುವುದು ಕಷ್ಟಕರವಾಗಿದೆ.
ರಥೋತ್ಸವಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದು, ಗ್ರಾಮಸ್ಥರು ಉತ್ಸವಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಬಂಧಪಟ್ಟ ಗುತ್ತಿಗೆದಾರರು, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ಗಮನಹರಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಸ್ಥಳೀಯ ಸಚಿವರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಥೋತ್ಸವ ಸುಗಮವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.