ಛಾಯಾಗ್ರಾಹಕರಿಗೆ ಸರಕಾರ ನೆರವು ನೀಡಬೇಕೆಂದು ಮನವಿ
ಸವದತ್ತಿ 28: ಕೊರೊನಾ ಅಲೆಯಿಂದ ಎರಡು ವರ್ಷಗಳಿಂದ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ಸರಕಾರ ನೆರವು ನೀಡಬೇಕೆಂದು ಸವದತ್ತಿ ಸಿಟಿ ಮತ್ತು ರೂರಲ್ ಫೋಟೋ ಮತ್ತು ವಿಡಿಯೋಗ್ರಾಫರ್ ಅಸೋಶಿಯೇಶನ್ದವರು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ ಹಾಗೂ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಂಘಟನೆ ಅಧ್ಯಕ್ಷ ಕಾಶೀಮ ಯಲಿಗಾರ ಹಾಗೂ ಕಾರ್ಯದರ್ಶಿ ಶರಣು ಸಂಪಗಾಂವಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಛಾಯಾಗ್ರಾಹಕರ ಜೀವನ ಕಷ್ಟದಾಯಕವಾಗಿದ್ದು, ನಮ್ಮ ಬದುಕು ಬೀದಿಗೆ ಬಂದಂತಾಗಿದೆ ಎಂದರು. ಸಾಲ ಸೋಲ ಮಾಡಿ ತಂದಿರುವ ಕ್ಯಾಮರಾಗಳ ಬಡ್ಡಿ ತೀರಿಸಲಾಗುತ್ತಿಲ್ಲ. ಲಾಕ್ಡೌನದಿಂದ ವೃತ್ತಿಯಿಲ್ಲದೆಯಿರುವದರಿಂದ ಕುಟುಂಬದ ನಿರ್ವಹಣೆ ಮಾಡಲು ಆಗುತ್ತಿಲ್ಲ ಎಂದರು. ಸಂಕಷ್ಟದಲ್ಲಿರುವ ವೃತ್ತಿನಿರತರಿಗೆ ಸಕಾರವು ನೆರವಿಗೆ ಬಂದು ನಮಗೆ ಬದುಕಲು ಅವಕಾಶ ಮಾಡಿಕೊಡಬೇಕೆಂದರು. ನಮ್ಮ ವೃತ್ತಿಯನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಲಾಗಿದ್ದು, ಅಸಂಘಟಿತ ಕಾರ್ಮಿಕರಿಗೆ ಸಿಗುವ ಸೌಲಭ್ಯತೆಗಳನ್ನು ನಮಗೂ ನೀಡಬೇಕೆಂದರು. ಅವಶ್ಯಕತೆಗೆ ಅನುಸಾರವಾಗಿ ಛಾಯಾಗ್ರಾಹಕರಿಗೆ ಬಡ್ಡಿರಹಿತ ಮತ್ತು ಜಾಮೀನುರಹಿತ ಸಾಲವನ್ನು ನೀಡಿ ನಮ್ಮನ್ನು ಕೂಡ ಮುಖ್ಯವಾಹಿನಿ ಕಾರ್ಯಕರ್ತರೆಂದು ಪರಿಗಣಿಸಿ ನಮಗೆ ಮತ್ತು ನಮ್ಮ ಕುಟುಂಬಗಳಿಗೆ ತ್ವರಿತವಾಗಿ ಲಸಿಕೆಯನ್ನು ನೀಡಬೇಕೆಂದು ಮನವಿಸಿದರು.
ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರು ಮನವಿ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಅನೇಕರು ಕೊರೊನಾ ಸಂದಿಗ್ಧ ಸ್ಥತಿಯಲ್ಲಿ ಸಂಕಷ್ಟವನ್ನು ಅನುಭವಿಸುತ್ತಿದ್ದು, ಅವರ ಕಷ್ಟ-್ಟಕ್ಕೆ ಸ್ಪಂದನೆ ನೀಡುವುದು ನಮ್ಮ ಕರ್ತವ್ಯ ಎಂದರು. ಪತ್ರಕರ್ತರು, ಛಾಯಾಗ್ರಾಹಕರು ಸೇರಿದಂತೆ ಎಪಿಎಮ್ಸಿ ಹಮಾಲಿಗಳು, ಕಾರಕೂನರಿಗೆ ಸರಕಾರದಿಂದ ಸಹಾಯಧನ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು. ಕೂಡಲೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರದ ಮಟ್ಟದಲ್ಲಿ ಚರ್ಚಿಸಿ ಛಾಯಾಗ್ರಾಹಕರಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಗೀರೀಶ ರೇವಡಿ, ಸುರೇಶ ಭೀ. ಬಾಳೋಜಿ, ಶಂಕರ ಮಾಳಶೆಟ್ಟಿ, ಅಂಬಾಜಿ ಜಾಮದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.