ನೋ ಫ್ಲೈ ಲಿಸ್ಟ್ ನಿಂದ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಗೆ ರಿಲೀಫ್!
ಇಸ್ಲಾಮಾಬಾದ್: ಏಪ್ರಿಲ್ 24: ಪಾಕಿಸ್ತಾನದ ಹೊಸ ಸರ್ಕಾರವು ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಹಲವು ಉನ್ನತ ವ್ಯಕ್ತಿಗಳ ಹೆಸರನ್ನು ‘ನೊ ಫ್ಲೈ ಲಿಸ್ಟ್’ ನಿಂದ ತೆಗೆದುಹಾಕಿದೆ. ಕಳೆದ ವಾರ ನಡೆದ ತನ್ನ ಮೊದಲ ಸಭೆಯಲ್ಲಿ, ನಿರ್ಗಮನ ನಿಯಂತ್ರಣ ಪಟ್ಟಿಯನ್ನು (ಇಸಿಎಲ್) ಪರಿಶೀಲಿಸುವಂತೆ ದೇಶದ ಆಂತರಿಕ ಸಚಿವಾಲಯಕ್ಕೆ ಕ್ಯಾಬಿನೆಟ್ ನಿರ್ದೇಶನ ನೀಡಿತ್ತು.
ಯಾವುದೇ ಅಡೆತಡೆಯಿಲ್ಲದೆ ಈಗ ದೇಶದಿಂದ ಹೊರಹೋಗಲು ಅನುಮತಿ ಪಡೆದವರಲ್ಲಿ ಪ್ರಧಾನಿ ಶಹಬಾಜ್ ಷರೀಫ್, ಅವರ ಪತ್ನಿ ನುಸ್ರತ್ ಶಹಬಾಜ್, ಅವರ ಸೋದರ ಸೊಸೆ ಮರ್ಯಮ್ ನವಾಜ್ ಮತ್ತು ಶಾಹಿತ್ ಖಾಕನ್ ಅಬ್ಬಾಸಿ, ಅವರ ಮಗ ಅಬ್ದುಲ್ಲಾ ಖಾಕನ್ ಮತ್ತು ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಸೇರಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಮಾತನಾಡಿದ್ದ ಆಂತರಿಕ ಸಚಿವ ರಾಣಾ ಸನಾವುಲ್ಲಾ, ರಾಜಕೀಯ ಸೇಡಿನ ರೂಪವಾಗಿ ಅನೇಕ ಜನರ ಹೆಸರನ್ನು ಇಸಿಎಲ್‌ನಲ್ಲಿ ಈ ಹಿಂದಿನ ಸರಕಾರ ಇರಿಸಿತ್ತು. ಇದರಲ್ಲಿ ಪ್ರಮುಖವಾಗಿ 4863 ಜನರ ಹೆಸರುಗಳು ಇಸಿಎಲ್ ಕಪ್ಪುಪಟ್ಟಿಯಲ್ಲಿವೆ. 30 ಸಾವಿರ ಜನರ ಹೆಸರುಗಳು ತಾತ್ಕಾಲಿಕ ರಾಷ್ಟ್ರೀಯ ಗುರುತಿನ ಪಟ್ಟಿ (ಪಿಎನ್‌ಐಎಲ್) ನಲ್ಲಿವೆ ಎಂದು ಅವರು ತಿಳಿಸಿದ್ದರು.
ಇಸಿಎಲ್ ನಿಯಮಗಳನ್ನು ಮಾರ್ಪಾಡು ಮಾಡಲಾಗಿದ್ದು, ಇದರಿಂದ ನೇರವಾಗಿ 3500 ಜನರಿಗೆ ಅನುಕೂಲವಾಗಲಿದೆ ಎಂದು ಸನಾವುಲ್ಲಾ ಹೇಳಿದ್ದಾರೆ.