ಸರ್ವರ ಏಳ್ಗೆಗೆ ನಿರಾಣಿ ಸಂಕಲ್ಪ: ರಾಜಕಿರಣ ರಾಯ್
ರಬಕವಿ-ಬನಹಟ್ಟಿ 8: ಸಕ್ಕರೆ ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ಎಮ್ಆರ್ಎನ್ ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಆದ ಮುರಗೇಶ ನಿರಾಣಿಯವರು ತಾವಷ್ಟೆ ಬೆಳೆಯದೆ ಎಲ್ಲ ರೈತರು, ಕೃಷಿ ಕಾರ್ಮಿಕರು, ವಿದ್ಯಾವಂತ ಯುವಕರು ಎಲ್ಲರೂ ಒಟ್ಟಿಗೆ ಅಭಿವೃದ್ಧಿಯಾಗಲಿ ಮತ್ತು ರೈತರ ಆದಾಯ ದ್ವಿಗುಣವಾಗಲಿ ಎಂಬ ಸಂಕಲ್ಪ ತೊಟ್ಟು ಈ ಭಾಗದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿದ್ದಾರೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಾಜ್ ಕಿರಣ ರಾಯ್ ಹೇಳಿದರು.
ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿಯ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಗೆ ಭೇಟ್ಟಿ ನೀಡಿ ಮಾತನಾಡಿದ ರಾಜಕಿರಣ ರಾಯ್, ನಿರಾಣಿಯವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕೂಡ ಸ್ವಾಭಿಮಾನದ ಬದುಕು ಕಟ್ಟಿಕೊಡಲು ನಿರಂತರ ಶ್ರಮಿಸುತ್ತಿದ್ದಾರೆ ಎಂದರು.
ಅವರು ಸಮೀಪದ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯನ್ನು ಅವಲೋಕನ ಮಾಡಿ ದೇಶವು ಅಭಿವೃದ್ಧಿ ಹೊಂದಲು ರೈತರು ತಮ್ಮ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬೇಕು. ಅವರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗಬೇಕು. ವಿದ್ಯಾವಂತ ಯುವಕರಿಗೆ ಉದ್ಯೋಗ ಸೃಷ್ಟಿಯಾಗಬೇಕು, ರಾಷ್ಟ್ರೀಯ ವರಮಾನ ವೃದ್ಧಿಯಾಗಬೇಕು. ಹಾಗಾಗಬೇಕಾದರೆ ನಿರಾಣಿಯವರಂತಹ ಉದ್ಯಮಿಗಳು ಮುಂದೆ ಬಂದು ಕಾರ್ಖಾನೆಗಳನ್ನು ಸ್ಥಾಪಿಸಿ ರೈತರ ಕಚ್ಚಾ ಉತ್ಪನ್ನಗಳನ್ನು ಸಿದ್ಧ ವಸ್ತುಗಳನ್ನಾಗಿ ತಯಾರಿಸಬೇಕು. ಭಾರತ ದೇಶ ಶ್ರೀಮಂತ ಸಮೃದ್ಧಿಯ ಬಡವರ ರಾಷ್ಟ್ರ, ಇಲ್ಲಿನ ಅಪಾರ ಪ್ರಮಾಣದ ನಿಸರ್ಗದತ್ತ ಸಂಪನ್ಮೂಲಗಳು ಸದ್ಬಳಕೆಯಾಗುತ್ತಿಲ್ಲ ಎಂದರು. ಇಲ್ಲಿ ಕೃಷಿ ಸಂಬಂಧಿ ಉದ್ಯಮಗಳು ಹೆಚ್ಚು ಹೆಚ್ಚು ಸ್ಥಾಪನೆಯಾದರೆ ದುಡಿಯುವ ಕೈಗಳಿಗೆ ಉದ್ಯೋಗ ಸಿಗುತ್ತದೆ, ಸರಾಸರಿ ತಲಾದಾಯ ಏರಿಕೆಯಿಂದ ಜನರ ಜೀವನ ಮಟ್ಟ ಸುಧಾರಣೆ ಆಗಲು ಸಾಧ್ಯ. ದೇಶದ ಆರ್ಥಿಕತೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುತ್ತಿರುವ ನಿರಾಣಿಯವರು ಭವಿಷ್ಯದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಲಿ ಎಂದು ಆಶಿಸಿದರು.
ಅಔ2 ವಿಭಾಗವನ್ನು ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದರು. ಯೂನಿಯನ್ ಬ್ಯಾಂಕ್ನ ವಲಯ ವ್ಯವಸ್ಥಾಪಕ ಶ್ರೀನಿವಾಸನ್ ನಿರಾಣಿ ಗ್ರುಪ್ ಉನ್ನತೋನ್ನತ ಏಳಿಗೆಯಾಗಲಿ ಎಂದು ಹಾರೈಸಿದರು. ಗ್ರುಪ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ, ನಿರ್ದೇಶಕ ವಿಶಾಲ ನಿರಾಣಿ, ಸಂಸ್ಥೆಯ ಅಡ್ವೈಸರ್ ಆರ್ ವಿ ವಾಟ್ನಾಳ ಉಪಸ್ಥಿತರಿದ್ದರು.
ಕಾರ್ಖಾನೆಯ ತಾಂತ್ರಿಕ ನಿರ್ದೇಶಕ ಪಿ. ಎಸ್. ಕುಲಕರ್ಣಿಯವರು ಅತಿಥಿಗಳಿಗೆ ಎಲ್ಲ ವಿಭಾಗಗಳನ್ನು ಪರಿಚಯಿಸಿದವರು. ಎಲ್ಲ ವಿಭಾಗಗಳ ಮುಖ್ಯಸ್ಥರು, ಅಧಿಕಾರಿಗಳು, ಸ್ಥಳೀಯ ನಾಯಕರು, ರೈತರು, ಕಾರ್ಖಾನೆಯ ಸಿಬ್ಬಂದಿಯವರು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು. ಡಿಸ್ಟಿಲರಿ ವಿಭಾಗದ ವೆಂಕಣ್ಣ ಶಿ. ಜೈನಾಪುರ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಕಬ್ಬು ವಿಭಾಗದ ಮುಖ್ಯಸ್ಥ ವಿ. ಪಿ. ಚೌಗಲೆಯವರು ವಂದಿಸಿದರು.