ಕೊಪ್ಪಳ

ಪುಟ್ಟರಾಜ ಗವಾಯಿಗಳ ಸೇವೆ, ಸಂಗೀತ ಸಾಧನೆ ಸದಾ ಸ್ಮರಣೀಯ: ಈಶಪ್ಪ ಸ್ಟಾಂಪಿನ

ಪುಟ್ಟರಾಜ ಗವಾಯಿಗಳ ಸೇವೆ, ಸಂಗೀತ ಸಾಧನೆ ಸದಾ ಸ್ಮರಣೀಯ: ಈಶಪ್ಪ ಸ್ಟಾಂಪಿನ

ಲೋಕದರ್ಶನ ವರದಿ 


ಯಲಬುರ್ಗಾ   12: ಸಂಗೀತ, ಸಾಹಿತ್ಯ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಲಿಂ. ಪಂಡಿತ ಪುಟ್ಟರಾಜ ಗವಾಯಿಗಳ ಜೀವನ ಮತ್ತು ಸಾಧನೆಗಳು ಸಮಾಜಕ್ಕೆ ಸದಾ ಪ್ರೇರಣೆಯಾಗಿವೆ. ಅಂಧತ್ವವನ್ನು ಮೆಟ್ಟಿನಿಂತು ಸಂಗೀತದ ಮೂಲಕ ಸಾವಿರಾರು ಜನರ ಬದುಕಿನಲ್ಲಿ ಬೆಳಕು ಮೂಡಿಸಿದ ಅವರ ಸೇವೆ ಅನನ್ಯವಾದುದು ಎಂದು ಶ್ರೀ ಬಸವಲಿಂಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಈಶಪ್ಪ ಸ್ಟಾಂಪಿನ ಹೇಳಿದರು. ಪಟ್ಟಣದ ಶ್ರೀ ಬಸವಲಿಂಗೇಶ್ವರ ಭಜನಾ ಮಂಡಳಿ ಹಾಗೂ ಯುವಕ ಮಂಡಳಿ ಬಳಗದ ವತಿಯಿಂದ ಶ್ರೀ ಬಸವಲಿಂಗೇಶ್ವರ ವಿಜಯ ಕಲಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಲಿಂ. ಪಂಡಿತ ಪುಟ್ಟರಾಜ ಗವಾಯಿಗಳ 16ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತವನ್ನು ಕೇವಲ ಕಲೆಯಾಗಿ ಪರಿಗಣಿಸದೆ, ಅದನ್ನು ಭಕ್ತಿ, ಸಾಧನೆ ಮತ್ತು ಮಾನವೀಯ ಸೇವೆಯ ಮಾರ್ಗವನ್ನಾಗಿ ರೂಪಿಸಿದರು. 

 ತಮ್ಮ ಜೀವನವನ್ನೇ ಸಂಗೀತ ಹಾಗೂ ಸಮಾಜಸೇವೆಗೆ ಸಮರ​‍್ಿಸಿಕೊಂಡು ಅನೇಕ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದ ಮಹಾನ್ ಚೇತನ ಅವರು. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಮಹನೀಯರ ಸ್ಮರಣೆಯ ಮೂಲಕ ಅವರ ಸಾಧನೆ ಮತ್ತು ಸೇವಾ ಮನೋಭಾವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ಗುಳಗುಳ್ಳಿ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ, ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಸಾಧನೆಯ ಮೂಲಕ ಸಮಾಜಕ್ಕೆ ಮಾದರಿಯಾದ ಅವರು, ತಮ್ಮ ಬದುಕಿನ ಮೂಲಕ ಅನೇಕ ಪ್ರತಿಭೆಗಳಿಗೆ ಪ್ರೇರಣೆಯಾಗಿದ್ದಾರೆ.

ಅವರ ಸ್ಮರಣಾರ್ಥ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ನಾಡಿನ ಕಲೆ, ಸಂಸ್ಕೃತಿ ಹಾಗೂ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಭಜನಾ ಮಂಡಳಿ ಹಾಗೂ ಯುವಕ ಮಂಡಳಿ ಬಳಗದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ಅನ್ನ ಸಂತರೆ​‍್ಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಆದಪ್ಪ ಗುಳಗುಳ್ಳಿ, ನಾಗಪ್ಪ ಹಳೆಮನಿ, ಉಮೇಶಪ್ಪ ಬನ್ನಿಕೊಪ್ಪ, ಶರಣಪ್ಪ ಹುಬ್ಬಳ್ಳಿ, ಮಲ್ಲಪ್ಪ ಬನ್ನಿಕೊಪ್ಪ, ಬಸಪ್ಪ ಕೊತ್ತಲ್, ಮಲ್ಲಪ್ಪ ಭೂತೆ, ಈಶಪ್ಪ ಬನ್ನಿಕೊಪ್ಪ, ಅಶೋಕ ದಿವಟರ್, ಬಸಪ್ಪ ಹುಬ್ಬಳ್ಳಿ, ಬಸವಲಿಂಗಪ್ಪ ಇಟಗಿ, ಬಾಳನಗೌಡ ಚಂಪಗೌಡ್ರು, ಶೇಕಪ್ಪ ದಿವಟರ್, ನಿಂಬಣ್ಣ ಭೂತೆ, ಉಮೇಶ ಕುಂಬಾರ, ನಿಂಗಪ್ಪ ಸ್ಟಾಂಪಿನ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ