ಪುಟಿನ್ ‘ಪರಮಾಣು ಯುದ್ಧದ ಡ್ರಿಲ್’ ಆದೇಶ: ವಿಶ್ವದ ರಾಷ್ಟ್ರಗಳಲ್ಲಿ ತಳಮಳ!
ಮಾಸ್ಕೋ: ಮಾರ್ಚ್ 20: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ಯುದ್ಧದತ್ತ ಸಾಗುವ ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಎಂದು ಟೆಲಿಗ್ರಾಮ್ ಚಾನೆಲ್‌ಗಳನ್ನು ಉಲ್ಲೇಖಿಸಿ ಹಲವಾರು ಯುಕೆ ಮಾಧ್ಯಮ ವರದಿಗಳು ಮಾಡಿವೆ.
ಪರಮಾಣು ಯುದ್ಧದ ಅಭ್ಯಾಸಕ್ಕಾಗಿ ಪುಟಿನ್ ತನ್ನ ಸೈನ್ಯವನ್ನು ಅಭ್ಯಾಸ ಮಾಡಲು ಆದೇಶಿಸಿದ ಕಾರಣ ವಿಶ್ವದ ರಾಷ್ಟ್ರಗಳಲ್ಲಿ ಈ ಸಂಚಲನ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ, ತನ್ನ ಕುಟುಂಬವನ್ನು ಸುರಕ್ಷತೆಗಾಗಿ ಸೈಬೀರಿಯಾಕ್ಕೆ ಕಳುಹಿಸಿದ್ದಾರೆಂಬ ಮಾಹಿತಿಯೂ ಹೊರಬಿದ್ದಿದೆ. ಇದೇ ಸಂದರ್ಭದಲ್ಲಿ ಪರಮಾಣು ಡ್ರಿಲ್‌ನ ವರದಿಯು ಕ್ರೆಮ್ಲಿನ್ (ರಷ್ಯಾದ ಅಧ್ಯಕ್ಷೀಯ ಕಚೇರಿ) ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಪುಟಿನ್ ಅವರ ನಿರ್ಧಾರದ ಪರಿಣಾಮಗಳು ಎಷ್ಟು ಭೀಕರವಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 25 ದಿನಗಳ ಯುದ್ಧದ ನಂತರವೂ ಉಕ್ರೇನ್ ಇನ್ನೂ ಶಸ್ತ್ರಾಸ್ತ್ರಗಳನ್ನು ತ್ಯಜಿಸಿಲ್ಲ. ಇದು ಪುಟಿನ್ ಅವರನ್ನು ಕೆರಳಿಸಿದ್ದು, ಈ ವಿಚಾರವನ್ನು ರಷ್ಯಾ ಸವಾಲಾಗಿ ಸ್ವೀಕರಿಸಿದೆ. ಪುಟ್ಟ ದೇಶವೊಂದು ತನಗೆ ಸವಾಲೊಡ್ಡುತ್ತಿದೆ ಎಂದು ಪುಟಿನ್ ಈ ವಿಧ್ವಂಸಕ ಕೃತ್ಯಕ್ಕೆ ಕೈ ಹಾಕುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಪುಟಿನ್ ಅವರ ಕುಟುಂಬ ಸದಸ್ಯರ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ ರುಸ್ಸೋ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಪುಟಿನ್ ಅವರು ತಮ್ಮ ಕುಟುಂಬದ ಸದಸ್ಯರನ್ನು ಸೈಬೀರಿಯಾಕ್ಕೆ ಕಳುಹಿಸಿದ್ದಾರೆ ಎಂದು ವರದಿಗಳು ಹೇಳಿವೆ. ಸೈಬೇರಿಯಾದಲ್ಲಿರುವ ಅಲ್ಟಾಯ್ ಪರ್ವತಗಳಲ್ಲಿ ಸಂಪೂರ್ಣ ಹೈಟೆಕ್ ಆಗಿರುವ ಭೂಗರ್ಭಿತ ಬಂಕರ್ ನಲ್ಲಿ ಇರಿಸಿದ್ದಾರೆ ಎಂಬ ಮಾಹಿತಿಯೂ ಇದೆ.
ಪುಟಿನ್ ಅಪಾಯಕಾರಿ ಪ್ಲಾನ್ ರೆಡಿ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಪರಮಾಣು ಸಂಘರ್ಷಕ್ಕಾಗಿ ರಷ್ಯಾ ಡೂಮ್ಸ್‌ಡೇ ವಿಮಾನಗಳನ್ನು ಹೊಂದಿದೆ. ಇದನ್ನು ಪುಟಿನ್ ಮತ್ತು ಅವರ ನಿಕಟವರ್ತಿಗಳಉ ಪರಮಾಣು ಯುದ್ಧದಲ್ಲಿ ಬಳಸುತ್ತಾರೆ. ಸ್ಕೈ ಬಂಕರ್ ಕೂಡ ಡೂಮ್ಸ್‌ಡೇ ಯೋಜನೆಯಡಿಯಲ್ಲಿತ್ತು. ಆದರೆ ಅದು ಇನ್ನೂ ಸಿದ್ಧವಾಗಿಲ್ಲ ಎಂದು ಹೇಳಲಾಗುತ್ತಿದೆ.