ಯರಗಟ್ಟಿ ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತ; ಗ್ರಾಮಸ್ಥರ ಆಕ್ರೋಶ
ಲೋಕದರ್ಶನ ವರದಿ
ಯರಗಟ್ಟಿ 05 : ತಾಲೂಕಿನ ಕೆಲವು ಗ್ರಾಮದಲ್ಲಿ ನಿರ್ವಹಣೆ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದು, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ತಾಲೂಕಿನ ಗ್ರಾಮಗಳಾದ ಆಲದಕಟ್ಟಿ ಕೆ.ಎಂ, ಯರಗಣವಿ, ಕೊಡ್ಲಿವಾಡ, ಕುರುಬಗಟ್ಟಿ, ಗೋವನಕೊಪ್ಪ ಗ್ರಾಮದಲ್ಲಿ ಜನಸಂಖ್ಯೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ, ಹಲವು ತಿಂಗಳಿಂದ ಘಟಕ ಸ್ಥಗಿತಗೊಂಡಿದೆ. ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಕಾತರಕಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ಅವಲಂಬಿಸಿದ್ದಾರೆ.
ಜನರ ನೀರಿನ ದಾಹ ತಣಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದು. ಜನರು ಶುದ್ಧ ನೀರಿಗಾಗಿ ಅಲೆದಾಡುವಂತಾಗಿದೆ. ಗ್ರಾಮಸ್ಥರು ಬೇರೆ ಗ್ರಾಮಕ್ಕೆ ಹೋಗಿ ನೀರು ತುಂಬಿಸಿಕೊಂಡು ಬರುವ ಸ್ಥಿತಿ ಬಂದೊದಗಿದೆ. 'ಸರ್ಕಾರ, ಜಿಲ್ಲಾಡಳಿತ ಬೇಸಿಗೆಯಲ್ಲಿ ಜನರಿಗೆ ಶುದ್ಧ ನೀರು ಒದಗಿಸಲು ಹಲವು ಕ್ರಮ ಕೈಗೊಂಡಿದೆ. ಆದರೆ ತಾಲೂಕಿನಲ್ಲಿ ಮರೀಚಿಕೆ ಯಾಗಿದೆ. ಜಿಲ್ಲಾಡಳಿತ ಶೀಘ್ರ ನಮ್ಮ ಗ್ರಾಮದತ್ತ ಗಮನಹರಿಸಿ ಶುದ್ಧ ನೀರಿನ ಘಟಕ ಪ್ರಾರಂಭಿಸಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು' ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.