ಅಂತರರಾಷ್ಟ್ರೀಯ

ಶ್ರೀಲಂಕಾದಲ್ಲಿ ಹೋರಾಟದ ಬಿಸಿ; ಅಧ್ಯಕ್ಷರ ನಿವಾಸದ ಜಿಮ್ ನಲ್ಲಿ ಪ್ರತಿಭಟನಾಕಾರರ ಕಸರತ್ತು

ಶ್ರೀಲಂಕಾದಲ್ಲಿ ಹೋರಾಟದ ಬಿಸಿ; ಅಧ್ಯಕ್ಷರ ನಿವಾಸದ ಜಿಮ್ ನಲ್ಲಿ ಪ್ರತಿಭಟನಾಕಾರರ ಕಸರತ್ತು

ಕೊಲಂಬೊ: ಜುಲೈ 10: ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ನಿವಾಸವನ್ನು ವಶಪಡಿಸಿಕೊಂಡಿರುವ ಪ್ರತಿಭಟನಾಕಾರರು ಅವರ ಮನೆಯಲ್ಲಿ ಮನಬಂದಂತೆ ಎಂಜಾಯ್ ಮಾಡ್ತಿದ್ದಾರೆ. ಅಧ್ಯಕ್ಷರ ವಿರುದ್ಧ ಕೋಪಗೊಂಡಿರುವ ಪ್ರತಿಭಟನಾಕಾರರು ನಿನ್ನೆ ನಿವಾಸವನ್ನು ವಶಪಡಿಸಿಕೊಂಡಿದ್ದು ಅವರ ಅರಮನೆಯು ಕೊಲಂಬೊದಲ್ಲಿ ಹೊಸ ಪ್ರವಾಸಿ ತಾಣವಾಗಿದೆ. ಇಂದು ಅರಮನೆಯಲ್ಲಿರುವ ಜಿಮ್‌ನಲ್ಲಿ ಜನಸಾಗರವೇ ಕಸರತ್ತು ನಡೆಸುತ್ತಿರುವುದು ಕಂಡುಬಂತು.

ಜಿಮ್‌ನಲ್ಲಿನ ಟ್ರೆಡ್‌ಮಿಲ್‌ಗಳ ಬಳಕೆ , ಕಾರ್ಡಿಯೋ ಮತ್ತು ತೂಕದ ಉಪಕರಣಗಳನ್ನು ಸಹ ಬಳಸುತ್ತಿದ್ದು ಮನಬಂದಂತೆ ವರ್ತಿಸುತ್ತಿದ್ದಾರೆ.  ಶನಿವಾರ  ಪ್ರತಿಭಟನಾಕಾರರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ನಾನ ಮಾಡುತ್ತಿರುವುದು, ಅಡುಗೆಮನೆಯಲ್ಲಿ ಊಟ ಮಾಡುವುದು ಮತ್ತು ಅಧ್ಯಕ್ಷರ ಮನೆಯಲ್ಲಿ ಮಲಗುವ ಕೋಣೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ವೀಡಿಯೊಗಳು ಹೊರಬಿದ್ದ ಬೆನ್ನಲ್ಲೇ ಇಂದಿನ ವಿಡಿಯೋ ವೈರಲ್ ಆಗ್ತಿದೆ.

ಅಧ್ಯಕ್ಷ ರಾಜಪಕ್ಸೆ ಅವರು ಪಲಾಯನಗೈದಿದ್ದು ಪ್ರಸ್ತುತ ಶ್ರೀಲಂಕಾ ನೌಕಾಪಡೆಯ ಹಡಗಿನಲ್ಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ನಿನ್ನೆ ಶ್ರೀಲಂಕಾ ಸರ್ಕಾರ ಜುಲೈ 13 ರಂದು ಅಧ್ಯಕ್ಷ ರಾಜಪಕ್ಸೆ ರಾಜೀನಾಮೆ ನೀಡುವುದಾಗಿ ಹೇಳಿದೆ.

ಆದರೆ ರಾಜಪಕ್ಸೆ ರಾಜೀನಾಮೆ ನೀಡುವವರೆಗೂ ಅವರ ನಿವಾಸದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ನಮ್ಮ ಹೋರಾಟ ಕೊನೆಗೊಂಡಿಲ್ಲ, ಅವರು ನಿಜವಾಗಿಯೂ ಅಧಿಕಾರ ತೊರೆಯುವವರೆಗೂ ನಾವು ಈ ಹೋರಾಟವನ್ನು ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿ ಮುಖಂಡರು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಮತ್ತು ರಾಜಪಕ್ಸೆ ಕುಟುಂಬದ ಅಸಮರ್ಥತೆ ಮತ್ತು ಭ್ರಷ್ಟಾಚಾರದಿಂದ ಕೋಪಗೊಂಡ ಜನರು ತಿಂಗಳ ಪ್ರತಿಭಟನೆಗಳ ನಂತರ ತೀವ್ರತರ ಹೋರಾಟಕ್ಕಿಳಿದಿದ್ದಾರೆ.

ಶ್ರೀಲಂಕಾ ತೀವ್ರ ವಿದೇಶಿ ವಿನಿಮಯ ಕೊರತೆಯಿಂದ ತತ್ತರಿಸುತ್ತಿದೆ. ಇದು ಸುಮಾರು ಏಳು ದಶಕಗಳಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ದೇಶವು ತೀವ್ರವಾದ ಆಹಾರ ಮತ್ತು ಇಂಧನ ಕೊರತೆಯ ಜೊತೆಗೆ ದೀರ್ಘಕಾಲದ ಕತ್ತಲೆಯಿಂದ ತತ್ತರಿಸಿದೆ.

ಸುದ್ದಿ ಓದಿ