ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಬೆಳಗಾವಿ 02: ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಸಿಲಿಂಡರ್ ದರಗಳನ್ನು ತಕ್ಷಣ ಇಳಿಸುವಂತೆ ಆಗ್ರಹಿಸಿ ನ್ಯಾಯವಾದಿಗಳು ಹಾಗೂ ನಾಗರಿಕರು ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಕೀಲರು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದರೂ, ನಮ್ಮ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಬೆಲೆಯು ಗಗನಕ್ಕೆ ಏರುತ್ತಿದೆ. ಇದರಿಂದ ಜೀವನಾವಶ್ಯಕತೆ ವಸ್ತುಗಳ ಬೆಲೆಯು ಏರಿಕೆಯಾಗಿದೆ. ಮಧ್ಯಮ ವರ್ಗದ ಜನತೆ ಹಾಗೂ ಬಡ ಜನತೆಗೆ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ. ತಕ್ಷಣವೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಇಳಿಸಿ ಬಡಜನರಿಗೆ ಸಹಾಯ ಮಾಡಬೇಕೆಂದರು.
ಅಲ್ಲದೆ ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆ ಗುಣಮಟ್ಟದ ಹಾಗೂ ನಿಧಾನಗತಿಯಲ್ಲಿ ನಡೆಯುತ್ತಿರುವುದು ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದೆ. ಈ ಹಿನ್ನಲೆಯಲ್ಲಿ ಗುಣಮಟ್ಟದ ಹಾಗೂ ತ್ವರಿತಗತಿಯಲ್ಲಿ ಕಾಮಗಾರಿಗಳು ನಡೆಯುವಂತೆ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಅಣ್ಣಾಸಾಹೇಬ ಘೋರೆ್ಡ, ಬಿ.ಪಿ.ಜೇವಣಿ, ಆರ್.ಆರ್.ನಲವಡೆ, ಸುಭಾಷ ಮಾದಗೇಕರ, ಮೋಹನ ನಂದಿ, ವಾಯ್.ಕೆ.ದಿವಟೆ, ಜಿ.ಡಿ.ಭಾವಿಕಟ್ಟಿ ಶ್ರೀಧರ ಗುರುವ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.